ಚೀನೀ ವಾಸ್ತು

ಚೀನದ ನಾಗರಿಕತೆ ಬಹಳ ಪುರಾತನವಾದ್ದಾದರೂ ಅದರ ಕಲೆಯ ಇತಿಹಾಸ ಪುರಾವೆಗಳು ಪ್ರಾರಂಭಕಾಲದಿಂದ ದೊರಕುತ್ತಿದ್ದರೂ ಅಲ್ಲಿಯ ವಾಸ್ತುಕೃತಿಗಳ ಅವಶೇಷಗಳು ಅಖಂಡವಾಗಿ ಕಂಡುಬರುವುದು 14ನೆಯ ಶತಮಾನದ ಮಿಂಗ್ ರಾಜವಂಶದ ಆಳ್ವಿಕೆಯ ಕಾಲದಿಂದಲೇ. ಆ ವೇಳೆಗೆ ಚೀನೀ ವಾಸ್ತುವಿನ ರೀತಿನಿಯಮಗಳು ನಿರ್ದಿಷ್ಟ ರೂಪ ಪಡೆದು, ಪರಾಕಾಷ್ಠೆ ತಲುಪಿ, ಕ್ರಮೇಣ ಅವನತ ಮುಖವಾಗಿದ್ದವು. ಸಾಮಾನ್ಯವಾಗಿ ಚೀನದ ಪುರಾತನ ವಾಸ್ತು ಕೃತಿಗಳು ಶೀಘ್ರವಾಗಿ ನಾಶವಾಗುವ ಮಣ್ಣು ಮತ್ತು ಮರದಿಂದ ನಿರ್ಮಿತವಾಗಿದ್ದುದರಿಂದ ಕಣ್ಮರೆಯಾಗಿವೆ. ಆದರೂ ಪ್ರಾಚೀನ ಕಾಲದ ಹಲವಾರು ವಾಸ್ತುರಚನೆಗಳ ಬಗ್ಗೆ ಲಭ್ಯವಿರುವ ಸಾಹಿತ್ಯಕ ಆಧಾರಗಳಿಂದಲೂ, ಅವುಗಳ ಮಾದರಿಯಲ್ಲಿ ಜಪಾನ್ ಮತ್ತು ಕೊರಿಯಗಳಲ್ಲಿ ನಿರ್ಮಾಣವಾಗಿ ಉಳಿದು ಬಂದಿರುವ ಅವಶೇಷಗಳಿಂದಲೂ ಅವನ್ನು ಕುರಿತ ಅನೇಕ ಮಾಹಿತಿಗಳು ದೊರಕುತ್ತವೆ. ಭೂಮಿಯಲ್ಲಿ ಹೂತುಹೋಗಿದ್ದ ಮತ್ತು ಅಲ್ಲಲ್ಲಿ ಉಳಿದು ಬಂದಿರುವ ವಾಸ್ತು ನಿರ್ಮಾಣಗಳ ಪರಿಚಯ ಈಚೆಗೆ ನಡೆಯುತ್ತಿರುವ ಪ್ರಾಕ್ತನ ಶಾಸ್ತ್ರೀಯ ಅಧ್ಯಯನಗಳಿಂದ ಆಗುತ್ತದೆ. ಈ ಎಲ್ಲ ಆಧಾರಗಳ ಆಳವಾದ ಸಮೀಕ್ಷೆಯಿಂದ ಚೀನೀ ವಾಸ್ತು ಇತಹಾಸವನ್ನು ಪುನರ್‍ರಚಿಸಬೇಕಾಗುತ್ತದೆ.

ಹೋನ್ಯಾನ್ ಪ್ರಾಂತ್ಯದ ಆಗಿನ ರಾಜಧಾನಿ ಅನ್ಯಾಂಗ್ ಬಳಿ ನಡೆದ ಉತ್ಖನನಗಳಲ್ಲಿ ಷಾಂಗ್ ವಂಶದ (ಕ್ರಿ.ಪೂ.1300-1028) ರಾಜಧಾನಿಯ ಕೆಲವು ಕಟ್ಟಡಗಳ ಅವಶೇಷಗಳು ದೊರಕಿವೆ. ಅವುಗಳಲ್ಲಿ ಹೆಚ್ಚು ಸಾಲುಮರದಲ್ಲಿ ನಿರ್ಮಿತವಾಗಿದ್ದುವು. ಅವು ನಾಶವಾಗಿವೆ. ಆದರೆ ಮಣ್ಣಿನ ವೇದಿಕೆಯ ಅಡಿಪಾಯದ ನಕ್ಷೆ ಮತ್ತು ಮರದ ಕಂಬಗಳಿಗಾಗಿ ಒದಗಿಸಿದ್ದ ಕಲ್ಲಿನ ಆಧಾರಗಳು ದೊರಕಿವೆ. ಈ ವಿವರಗಳಿಂದ ತಿಳಿದು ಬರುವಂತೆ, ಒಂದು ದೊಡ್ಡ (90' ಉದ್ದ) ಆಯಾಕಾರದ ಹಜಾರವಿತ್ತು. ಈ ತಳಕಟ್ಟಿನ ನಕ್ಷೆ ಚೀನದ ಆನಂತರ ಕಾಲದ ಕಟ್ಟಡಗಳ ಅಡಿಪಾಯವನ್ನು ಹೋಲುವುದರಿಂದ ಇತಿಹಾಸದುದ್ದಕ್ಕೂ ಈ ಪದ್ಧತಿ ಮುಂದುವರಿಯಿತೆಂದು ಹೇಳಬಹುದು. ಎರಡು ಪ್ರಮುಖ ಅಂಶಗಳೆಂದರೆ ಗ್ರಾಮ ಅಥವಾ ನಗರದ ಸುತ್ತಲಿನ ಕೆಳಭಾಗದಲ್ಲಿ 12' ದಪ್ಪದ ಮಣ್ಣಿನ ಪೌಳಿಗೋಡೆ, ಪ್ರಮುಖ ಕಟ್ಟಡಗಳಿಗಾಗಿ ನಿರ್ಮಿಸುತ್ತಿದ್ದ ಮಣ್ಣಿನ ವೇದಿಕೆ-ಇವು ಆ ಕಾಲದಲ್ಲಿ ರೂಢಿಗೆ ಬಂದ ಎರಡು ಪ್ರಮುಖ ಅಂಶಗಳೆಂಬುದನ್ನು ಮತ್ತೆ ನಡೆಸಿದ ಉತ್ಖನನಗಳಲ್ಲಿ ದೊರೆತ ಮಾಹಿತಿಗಳಿಂದ ಊಹಿಸಬಹುದಾಗಿದೆ. ಚೀನೀ ವಾಸ್ತು ನಿರ್ಮಾಣಗಳ ನಿರಂತರ ಲಕ್ಷಣಗಳಾಗಿ ಇವು ಮುಂದುವರಿದುವು. ಕೋಟೆ ಗೋಡೆಗಳಲ್ಲಿ ಅಲ್ಲಲ್ಲಿ ಕಾವಲುಗಾರರಿಗಾಗಿ ಬತೇರಿಗಳನ್ನು ಕಟ್ಟಲಾಗುತ್ತಿತ್ತು. ಕಟ್ಟಡಗಳನ್ನು ಸಾಮಾನ್ಯವಾಗಿ ದಕ್ಷಿಣಾಭಿಮುಖವಾಗಿ ನಿರ್ಮಿಸುತ್ತಿದ್ದರು. ಅನ್ಯಾಂಗ್‍ನಲ್ಲಿರುವ ಸಮಾಧಿಗಳು ಭೂ ಮಟ್ಟದಿಂದ 40' ಆಳದಲ್ಲಿ, ನಾಲ್ಕು ಪಾಶ್ರ್ವಗಳಿಂದಲೂ ಸೋಪಾನಗಳಿದ್ದ, ಚಚ್ಚೌಕವಾದ ಮರದ ಹಲಗೆಗಳಿಂದ ನಿರ್ಮಿಸಿದ ಗೋಡೆಗಳುಳ್ಳ , ಒಬ್ಬ ಮನುಷ್ಯನೆತ್ತರದ ಕೋಣೆಗಳಾಗಿರುತ್ತಿದ್ದುವು. ದಕ್ಷಿಣದ ಸೋಪಾನಗಳು ವಿಶಾಲವಾಗಿರುತ್ತಿದ್ದುವು ; ಕಡಿದಾಗಿರುತ್ತಿರಲಿಲ್ಲ. ಉಳಿದ ಮೂರು ದಿಕ್ಕುಗಳ ಸೋಪಾನಗಳು ಇಕ್ಕಟ್ಟಾಗಿಯೂ ಕಡಿದಾಗಿಯೂ ಇರುತ್ತಿದ್ದುವು. ಮನೆಗಳ ಚಾವಣಿಗಳು ಸಾಮಾನ್ಯವಾಗಿ ಹುಲ್ಲಿನವು.

ಉತ್ತರ ಚೀನದಲ್ಲಿ ಷಾಂಗ್ ಮತ್ತು ಅದಕ್ಕೂ ಹಿಂದಿನ ಕಾಲದಲ್ಲಿ ಭೂಮಿಯೊಳಗೆ ಅಗೆದು ನಿರ್ಮಿಸಿದ ಗುಂಡಿಮನೆಗಳಲ್ಲಿ ಅಥವಾ ಹುಲ್ಲು-ಎಲೆಗಳಿಂದ ನಿರ್ಮಿಸಿದ ದೊಡ್ಡ ಗೂಡುಗಳಲ್ಲಿ ಅಥವಾ ಪರ್ವತ ಪ್ರದೇಶಗಳ ಗುಹೆಗಳಲ್ಲಿ ಜನರು ವಾಸಿಸುತ್ತಿದುದಾಗಿ ಸಾಹಿತ್ಯಾಧಾರಗಳಿಂದ ತಿಳಿಯುತ್ತದೆ. ಗುಂಡಿಮನೆಗಳ ಚಾವಣಿಯನ್ನು ಭೂಮಟ್ಟದಿಂದ ಮೇಲೆ ಎಲೆ ಅಥವಾ ಹುಲ್ಲಿನಿಂದ ಮಾಡಲಾಗುತ್ತಿತ್ತು. ಈಗಲೂ ಗುಂಡಿಮನೆ ಅಥವಾ ಗುಹೆಗಳಲ್ಲಿ ವಾಸಿಸುತ್ತಿರುವ ಜನ ಆ ಪ್ರದೇಶದಲ್ಲಿ ಕಾಣಬರುತ್ತಾರೆ. ದುಷ್ಟಮೃಗಗಳ, ಹಾವುಗಳ ಮತ್ತು ಪ್ರವಾಹಗಳ ಬಾಧೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎತ್ತರವಾದ ಮರದ ಅಟ್ಟಣೆಗಳ ಮೇಲೆ ಹುಲ್ಲು-ಎಲೆಗಳಿಂದ ನಿರ್ಮಿಸಿದ ದೊಡ್ಡ ಗೂಡುಮನೆಗಳಲ್ಲಿ (ಬೆಚ್ಚಗಿನ ಹವೆಯಲ್ಲಿ) ವಾಸಿಸುತ್ತಿದ್ದರು. ದಕ್ಷಿಣ ಚೀನದ ಉಷ್ಣಪ್ರದೇಶದಲ್ಲಿ ಈಚಿನವರೆಗೂ ಇಂಥ ವಸತಿಗಳು ಬಳಕೆಯಲ್ಲಿದ್ದುವು.

ಚೌ ವಂಶದ (ಕ್ರಿ.ಪೂ. 1027-256) ಕೊನೆಯ ಕಾಲದಲ್ಲಿ ಗೋಡೆಗಳ ವೇದಿಕೆಗಳ ಮತ್ತು ಚಾವಣಿಯ ಹೆಂಚುಗಳ ಅವಶೇಷಗಳು ಉತ್ಖನನಗಳಲ್ಲಿ ಕಂಡುಬಂದಿವೆ. ಅವನ್ನು ಬಿಟ್ಟರೆ ಆ ಕಾಲದ ವಾಸ್ತು ನಿರ್ಮಿತಿಗಳ ಬಗ್ಗೆ ಕೇವಲ ಸಾಹಿತ್ಯಕ ಆಧಾರಗಳು ಮಾತ್ರ ದೊರೆಯುತ್ತವೆ. ಅವುಗಳಿಂದ ಹೆಚ್ಚು ಮಾಹಿತಿಗಳು ಸಿಕ್ಕುವುದಿಲ್ಲ. ಆಗಿನ ಕಟ್ಟಡಗಳಲ್ಲಿ ಅರಮನೆಗಳು, ಪುರಾತನ ಸ್ಮಾರಕ ಮಂದಿರಗಳು ಮುಖ್ಯವಾದವು. ಮರಗಳಿಂದ ನಿರ್ಮಿಸಿದ ಆ ಕಟ್ಟಡಗಳು ವಿಶಾಲವಾಗಿಯೂ ಕೌಶಲ ಪೂರ್ಣವಾಗಿಯೂ ಇದ್ದುವು. ಅವುಗಳ ದೊಡ್ಡ ಕಂಬಗಳು, ವಿಶಾಲವಾದ ಹಜಾರಗಳು, ಪ್ರಾಂಗಣಗಳು ಗಮನಾರ್ಹವಾಗಿದ್ದುವು. ಕಟ್ಟಡಗಳ ಅಲಂಕರಣಕ್ಕೆ ಪ್ರಾಧಾನ್ಯ ನೀಡಲಾಗಿತ್ತು. ವ್ಯಕ್ತಿಗಳ ಸಾಮಾಜಿಕ ಅಂತಸ್ತುಗಳಿಗನುಸಾರವಾಗಿ ಅವರ ವಾಸಗೃಹಗಳು ವಿಶಾಲವಾಗಿಯೂ ಅಲಂಕಾರಯುತವಾಗಿಯೂ ವಿವಿಧ ಬಣ್ಣಗಳಿಂದ ಚಿತ್ರಿತವಾಗಿಯೂ ಇರಬೇಕಾಗಿತ್ತು. ರಾಜರ, ಶ್ರೀಮಂತರವರ್ಗದವರ ಅರಮನೆಗಳ ಮೇಲೆ ಕಾವಲುಗಾರ ಗೋಪುರಗಳಿರುತ್ತಿದ್ದುವು. ಕ್ರಿ.ಸ್ತಪೂರ್ವಕಾಲದಲ್ಲಿ ಮಿಂಗ್-ಟ್ಯಾಂಗ್ ಅಥವಾ ಸ್ವರ್ಗಸದೃಶವಾದ, ಹುಲ್ಲಿನ ಚಾವಣಿಯಿದ್ದ, ಕಟ್ಟಡಗಳಲ್ಲಿ ರಾಜರು ವಾಸಿಸುತ್ತಿದ್ದರಲ್ಲದೆ ತಮ್ಮ ಅಂತಸ್ತಿಗೆ ತಕ್ಕುವಾದ ಧಾರ್ಮಿಕ ವ್ರತಗಳನ್ನು ಅಂಥ ಕಟ್ಟಡಗಳಲ್ಲಿ ನಡೆಸಬೇಕಾಗಿತ್ತು ಎಂಬುದು ಸಾಹಿತ್ಯದಿಂದ ಗೊತ್ತಾಗುತ್ತದೆ. ಕ್ರಮೇಣ ಶ್ರೀಮಂತ ವರ್ಗದವರೂ ಮಿಂಗ್-ಟ್ಯಾಂಗ್ ಕಟ್ಟಡಗಳನ್ನು ಉಪಯೋಗಿಸಲಾರಂಭಿಸಿದರು.

ಕ್ರಿಸ್ತಯುಗದ ಪ್ರಾರಂಭದ ವೇಳೆಗೆ ಮಿಂಗ್-ಟ್ಯಾಂಗ್ ಒಂಬತ್ತು ಅಂಕಣಗಳ ದೊಡ್ಡ ಚಚ್ಚೌಕವಾಗಿತ್ತು. ಅದರ ತಳಹದಿ ಚೌಕವಾಗಿಯೂ ಮೇಲ್ಭಾಗ ದುಂಡಾಗಿಯೂ ಇರುತ್ತಿತ್ತು. ಚೀನ 1937ರಿಂದ 1945ರ ವರೆಗೆ ಜಪಾನೀಯರ ವಶದಲ್ಲಿದ್ದಾಗ ಜಪಾನೀ ಪ್ರಾಕ್ತನ ಶಾಸ್ತ್ರಜ್ಞರು ನಡೆಸಿದ ಉತ್ಖನನಗಳಿಂದ ಕೆಲವು ಅಂಶಗಳು ತಿಳಿದು ಬಂದವು. ಷಾನಟಂಗ್ ಪ್ರಾಂಯದ ಲಿನ್-ಟುಜ ನೆಲೆ ಚಿ ವಂಶದ ಕಾಲದಲ್ಲಿ ರಾಜಧಾನಿಯಾಗಿತ್ತೆಂದು ಗುರುತಿಸಲಾಗಿದೆ. ಪೂರ್ವಪಶ್ಚಿಮವಾಗಿ 11/4 ಮೈ. ಮತ್ತು ನೈಋತ್ಯ ಭಾಗದಲ್ಲಿ ಮತ್ತೊಂದು ಸಣ್ಣ ಆಯಾಕಾರದ ಪ್ರದೇಶದ ಸುತ್ತ ಒಳಕೋಟೆಯಿದೆ. ಅದು ಬಹುಶಃ ಅರಮನೆಯಿದ್ದ ಪ್ರದೇಶ. ಒಳಕೋಟೆಯ ಗೋಡೆ 30' ಎತ್ತರವಿದ್ದಂತೆ ಕಾಣುತ್ತದೆ. ವಂಶದ ರಾಜಧಾನಿಯಾಗಿದ್ದಿರಿರಬಹುದಾದ ಹೋಪೇ ಪ್ರಾಂತ್ಯದ ಇ-ಹ್ಸಿಯೆನ್ ಎಂಬಲ್ಲಿ ಮೊದಲಿನ ಎರಡರಷ್ಟು ವಿಶಾಲವಾದ ಕೋಟೆಯ ಆವಶೇಷಗಳಿವೆ. ಅವುಗಳೆಲ್ಲದರ ವಿನ್ಯಾಸಗಳು ಕ್ರಮಬದ್ಧವಾಗಿಲ್ಲ.

ಚಿನ್ ರಾಜವಂಶದ ಕಾಲದಲ್ಲಿ (ಕ್ರಿ.ಪೂ. 221-206) ದೇಶದ ಏಕತೆ ಸಾಧಿಸಿದ್ದರ ಫಲವಾಗಿ ಗಮನಾರ್ಹ ಅರಮನೆಗಳು, ರಾಜಮಾರ್ಗಗಳು ಮತ್ತು ವಿಶ್ವಪ್ರಸಿದ್ಧವಾದ ಚೀನದ ಮಹಾ ಗೋಡೆ ನಿರ್ಮಿತವಾದುವು. ರಾಷ್ಟ್ರೀಯ ಮಹತ್ವವನ್ನು ಲಕ್ಷ್ಯದಲ್ಲಿಟ್ಟುಕೊಂಡ ಮೊದಲ ನಿರ್ಮಾಣಗಳಿವು. ವಿವಿಧ ಪ್ರಾಂತ್ಯಗಳಲ್ಲಿ ತಲೆದೋರಿದ ಪ್ರಾದೇಶಿಕ ಶೈಲಿಗಳು ಕೇಂದ್ರಿಯ ರಾಜಧಾನಿಯಲ್ಲಿ ಪ್ರತಿಬಿಂಬಿತವಾಗಿದ್ದುವಲ್ಲದೆ ಕಾಲಾನುಕ್ರಮದಲ್ಲಿ ಅವೆಲ್ಲದರ ಸಮ್ಮಿಲನದಿಂದ ಒಂದು ಹೊಸ ರಾಷ್ಟ್ರೀಯ ಶೈಲಿ ಬೆಳೆಯಲು ಸಾಧ್ಯವಾಯಿತು. ಮತ್ತೆ ವಿವಿಧ ಪ್ರಾದೇಶಿಕ ಶೈಲಿಗಳನ್ನು ಒಂದೆಡೆ ಕಾಣುವಂತಾಯಿತು. ಚಿನ್ ಅರಸನ ಅರಮನೆ ಒಂದು ಬೃಹತ್ ಯೋಜನೆಯಾಗಿದ್ದು ಅದರ ಮುಂಭಾಗದ ಹಜಾರ 1,500'ಚೌಕವಾಗಿತ್ತು. ಅದರ ವೇದಿಕೆಯ ಎತ್ತರ 50'ಗೂ ಹೆಚ್ಚಿತ್ತು.

	ಹಾನ್ ವಂಶದ ಮೊದಲ ದೊರೆ (ಕ್ರಿ.ಪೂ. 200) ತನ್ನ ರಾಜಧಾನಿ ಚಾಂಗ್-ಅನ್‍ನಲ್ಲಿ ಕಟ್ಟಿಸಿದ ವೈ-ಯಾಂಗ್ ಅರಮನೆ ವಿಶಾಲವಾಗಿತ್ತು. ಉತ್ತರ ಮತ್ತು ಪೂರ್ವದಿಕ್ಕುಗಳಲ್ಲಿ ಗೋಪುರಗಳುಳ್ಳ ಹೆಬ್ಬಾಗಿಲುಗಳು, ದರ್ಬಾರಿನ ಹಜಾರ, ಆಯುಧಾಗಾರ ಮತ್ತು ದೊಡ್ಡ ಉಗ್ರಾಣಗಳು ಅದರಲ್ಲಿದ್ದುವು. ಖ್ಯಾತ ದೊರೆ ವು-ಟಿ (ಕ್ರಿ.ಪೂ. 140-87) ಅಮೋಘವಾದ ವಿಶ್ರಾಂತಿಧಾಮಗಳನ್ನೂ ಪಾರಲೌಕಿಕ ಸಂಬಂಧಸೂಚಕ ಮಂದಿರಗಳನ್ನೂ ನಿರ್ಮಿಸಿದನೆಂದು ಸಾಹಿತ್ಯದಿಂದ ತಿಳಿದುಬರುತ್ತದೆ. ಕ್ರಿ.ಶ. 3-4ನೆಯ ಶತಮಾನಗಳಲ್ಲಿ ಅರಾಜಕತೆ ನೆಲಸಿದ್ದರೂ ವಾಸ್ತುಕಲೆಯ ಸುವರ್ಣಯುಗವೆಂದು ವರ್ಣಿಸಲಾದ ಕಟ್ಟಡಗಳು ಹಾನ್ ದೊರೆಗಳ ಆಶ್ರಯದಲ್ಲಿ ನಿರ್ಮಾಣವಾದುವು.

	ಆಗಿನ ಚೀನೀ ವಾಸ್ತು ನಿರ್ಮಿತಿಗಳಲ್ಲಿ ಅಗ್ರಸ್ಥಾನ ಅರಮನೆಗೆ ಸೇರಿದ ಆಸ್ಥಾನ ಹಜಾರಕ್ಕೆ ಸಲ್ಲುತ್ತದೆ. ಅವು ಬೇರೆ ಬೇರೆ ಕಾಲಗಳಲ್ಲಿ ವಿವಿಧ ರಾಜಧಾನಿಗಳಲ್ಲಿ 400' x 110'-500' x 150' ವಿಸ್ತಾರವಾಗಿರುತ್ತಿದ್ದುವು. ಜಪಾನಿನಲ್ಲಿ 8ನೆಯ ಶತಮಾನಗಳಲ್ಲಿ ಅವುಗಳ ಮಾದರಿಯಲ್ಲಿ ಕಟ್ಟಿದ ಅತಿ ದೊಡ್ಡ ದೇವಾಲಯ ಟೋಡೈಜಿಯ ಬುದ್ಧ ಹಜಾರ 200' x 170' ವಿಸ್ತೀರ್ಣವಾಗಿತ್ತು. ಆಸ್ಥಾನದ ಹಜಾರಗಳ ಅನಂತರ ಪ್ರಧಾನವಾದ್ದೆಂದರೆ ವಿವಿಧ ರೀತಿಯ ಗೋಪಾರಗಳು ದೊಡ್ಡವಾದರೆ ಕಾವಲುಗಾರರ ನೆಲೆಗಳಾಗಿಯೂ ಸಣ್ಣವಾದರೆ ಗೋಡೆಯ ಮೇಲಿನ ಕಂಬಗಳಾಗಿಯೂ ಇರುತ್ತಿದ್ದುವು. ಈ ಗೋಪುರಗಳು ಎರಡರಿಂದ ಹದಿನೈದು-ಹದಿನೇಳು ಅಂತಸ್ತುಗಳಷ್ಟು ಎತ್ತರವಾಗಿದ್ದುವು.

	ಚೀನೀ ಅರಮನೆಗಳಲ್ಲಿ ವೈಶಾಲ್ಯ ಮತ್ತು ಎತ್ತರಕ್ಕೆ ಗಮನ ಕೊಟ್ಟ ರೀತಿಯಲ್ಲೇ ಅವುಗಳ ಅಲಂಕರಣಕ್ಕೂ ಆದ್ಯತೆ ನೀಡಲಾಗಿತ್ತು. ಶಿಲ್ಪಗಳಿಂದ, ವಿವಿಧ ಬಣ್ಣಗಳ ಲೇಪನದಿಂದ ಅವನ್ನು ಅಲಂಕರಿಸಲಾಗುತ್ತಿತ್ತು. ಕಟ್ಟಡಗಳ ಅವಶೇಷಗಳು ಉಳಿದು ಬಂದಿಲ್ಲವಾದರೂ ಸಾಹಿತ್ಯಕ ವರ್ಣನೆಗಳು, ವರ್ಣಚಿತ್ರಗಳು, ಕಲ್ಲಿನ ಉಬ್ಬು ಚಿತ್ರಗಳು ಮತ್ತು ಸುಟ್ಟ ಮಣ್ಣಿನ ಮಾದರಿ ಕೃತಿಗಳಿಂದ ಅವುಗಳ ಸೂಕ್ಷ್ಮ ನೋಟ ದೊರಕುತ್ತದೆ. ಹಾನ್ ಕಾಲದಲ್ಲಿ (ಕ್ರಿ.ಪೂ. 206-ಕ್ರಿ.ಶ. 221) ಜನಸಾಮಾನ್ಯರು ಹುಲ್ಲಿನ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಶ್ರೀಮಂತವರ್ಗ ಅಂಗಣದಿಂದ ಕೂಡಿದ ವಿಶಾಲ ಭವನಗಳಲ್ಲಿ ವಾಸಿಸುತ್ತಿದ್ದರು. ಈ ಮನೆಗಳಲ್ಲಿ ಅಂಗಣದ ಎರಡು ಬದಿಗಳಲ್ಲಿ ಕೋಣೆಗಳೂ ಹಿಂಬದಿಯಲ್ಲಿ ಹಜಾರವೂ ಇರುತ್ತಿದ್ದುವು. ಹೆಚ್ಚು ಸ್ಥಳಾವಕಾಶ ಒದಗಿಸಿಕೊಳ್ಳಲು ಒಂದರ ಹಿಂದೆ ಒಂದರಂತೆ ಹೆಚ್ಚು ಒಳಾಂಗಣಗಳನ್ನು ಸೇರಿಸಬಹುದಾಗಿತ್ತು. ಪಾಶ್ರ್ವಗಳಲ್ಲಿ ಮತ್ತು ಮುಂಭಾಗದಲ್ಲಿ ಪ್ರವೇಶದ್ವಾರಗಳಿದ್ದುವು. ಅನೇಕ ಕಟ್ಟಡಗಳಲ್ಲಿ ಎರಡು ಅಥವಾ ಹೆಚ್ಚು ಅಂತಸ್ತುಗಳಿರುತ್ತಿದ್ದುವು. ವಿಶಾಲವಾದ ಒಳಗಿನ ಹಜಾರಗಳು ಬಹಳ ಅಗಲವಾಗಿರುತ್ತಿದ್ದುದರಿಂದ ಅವನ್ನು ಪ್ರತ್ಯೇಕ ಅಂಕಣಗಳನ್ನಾಗಿ ವಿಭಾಗಿಸಿ ಪ್ರತಿಯೊಂದು ಅಂಕಣದ ಚಾವಣಿಗೂ ಪ್ರತ್ಯೇಕ ಸಾಲುಕಂಬಗಳ ಅಧಾರಗಳನ್ನು ಒದಗಿಸಿದ್ದಿರಬೇಕು.

	ಪೂರ್ವ ಪ್ರದೇಶದಲ್ಲಿ ಆಳುತ್ತಿದ್ದ ಹಾನ್ ದೊರೆಗಳ ಕಾಲದಲ್ಲಿ (25-221) ಬೌದ್ಧಧರ್ಮ ಚೀನವನ್ನು ಪ್ರವೇಶಿಸಿದಾಗ ಕೆಲವು ಬೌದ್ಧವಿಹಾರಗಳ ನಿರ್ಮಾಣವಾಯಿತು. ರಾಜಾಶ್ರಯದಲ್ಲಿ ನಿರ್ಮಿತವಾದ, ರಾಜ್ಯಾ ಕಚೇರಿಗಳನ್ನು ಹೋಲುತ್ತಿದ್ದ, ಆ ವಿಹಾರಗಳನ್ನು ಸ್ಸು ಎಂದು ಕರೆಯಲಾಗುತ್ತಿತ್ತು. ಭಾರತದ ಸ್ತೂಪಗಳ ಮಾದರಿಯಲ್ಲಿ ಹುಟ್ಟಿಕೊಂಡ ವಿಹಾರ ಅನಂತರಕಾಲದ ಚೀನೀ ಪಗೋಡದ ಆಕಾರದ ಪ್ರಥಮ ಹಂತ. ಎರಡು ಅಂತಸ್ತುಗಳ ಮಂದಿರದ ಮೇಲೆ ಒಂಬತ್ತು ಹಂತಗಳ ಕಂಚಿನ ಚಾವಣಿಯನ್ನು ನಿರ್ಮಿಸಲಾಗುತ್ತಿತ್ತಂತೆ. ಹಾನ್ ವಾಸ್ತುಶಿಲ್ಪಗಳಿಗೆ ಕಮಾನಿನ ಪರಿಚಯವಿತ್ತು. ಸಮಾಧಿಗಳಲ್ಲಿ ಇಟ್ಟಿಗೆಗಳಿಂದ ಕಮಾನುಗಳನ್ನು ನಿರ್ಮಿಸಿದ್ದಾರೆ. ಮೊದಲಿಗೆ ಚಾಚು ಆಧಾರದ ಕಮಾನುಗಳನ್ನು ನಿರ್ಮಿಸುತ್ತಿದ್ದರೂ ಮಂಚೂರಿಯಿಂದ ಯಿಂಗ್-ಚೆಂಗ್-ಟ್ಟು ಸಮಾಧಿಯಲ್ಲಿ ನೈಜವಾದ ಕಮಾನು ಕಾಣುಬರುತ್ತದೆ. ಆರು ರಾಜವಂಶಗಳ ಕಾಲದಲ್ಲಿ (265-581)ವಾಸ್ತುಕಲೆ ಕ್ಷೀಣಿಸಿತು. ಹಾನ್ ಕಾಲದ ನಿರ್ಮಾಣಗಳ ಅನುಕರಣೆ ಕಂಡುಬಂದರೂ ಅವುಗಳ ಚಾತುರ್ಯ, ತಾಂತ್ರಿಕ ನೈಪುಣ್ಯ ಕಣ್ಮರೆಯಾದವು. ಆದರೆ ಬೌದ್ಧಧರ್ಮ ಪ್ರಬಲವಾದಂತೆ ವಾಸ್ತುಕಲೆ ಪುನಶ್ಚೇತನಗೊಂಡು, ಉತ್ತರ ವೇ ಮತ್ತು ಲಿಯಾಂಗ್ ಅರಸರ ಆಶ್ರಯದಲ್ಲಿ ಉತ್ತಮ ನಿರ್ಮಾಣಗೊಳಾದವು. ಲೋಯಾಂಗ್ ನಗರದಲ್ಲಿ 42 ಪಗೋಡ, ಚೈತ್ಯಾಲಯಗಳಿದ್ದುದಾಗಿ ಹೇಳಲಾಗಿದೆ. ಲೋಯಾಂಗ್ ಪರಿಸರದಲ್ಲಿ ಒಟ್ಟು 500 ಬೌದ್ಧ ಮಂದಿರಗಳಿದ್ದುವು. ವೇ ರಾಜ್ಯ ಚೈತ್ಯಗಳ ಸಂಖ್ಯೆ 13,727.570ರ ಸುಮಾರಿಗೆ ಬೌದ್ಧ ನಿರ್ಮಾಣಗಳ ಸಂಖ್ಯೆ 30,000 ಕ್ಕೆ ಏರಿತು.

	ಭಾರತದಲ್ಲಿ ಬೌದ್ಧಧರ್ಮದ ಪ್ರಧಾನ ಕಟ್ಟಡ ಸ್ತೂಪವಾದರೆ ಚೀನದಲ್ಲಿ ಪಗೋಡ ಆ ಸ್ಥಾನವನ್ನಾಕ್ರಮಿಸಿತ್ತು. ಆ ಧರ್ಮ ಬೆಳೆದಂತೆ ಪಗೋಡಗಳ ಅಂತಸ್ತುಗಳು ಹೆಚ್ಚುತ್ತ ಹೋದುವು. 5ನೆಯ ಶತಮಾನದಲ್ಲಿ ಲಿಯಾಂಗ್ ದೊರೆ ವು-ಟಿ (ಆಳ್ವಿಕೆ 502-249) ಐದು ಅಂತಸ್ತುಗಳ ಪಗೋಡವನ್ನು ಕಟ್ಟಿಸಿದ ; ಅರಮನೆಯ ಸರಹದ್ದಿನಲ್ಲಿ ತನ್ನ ಪೂಜಾಕಾರ್ಯಕ್ಕಾಗಿ ಒಂಬತ್ತು ಅಂತಸ್ತುಗಳ ಮತ್ತೊಂದು ಪಗೋಡವನ್ನು ನಿರ್ಮಿಸಿದ. 100' ಎತ್ತರದ 3 ಅಂತಸ್ತುಗಳ ಇನ್ನೊಂದು ಪಗೋಡವೂ ನಿರ್ಮಿತವಾಯಿತು. 516ರಲ್ಲಿ ಲೋಯಾಂಗ್ ರಾಜಧಾನಿ ಆದ ಅನಂತರ 9 ಅಂತಸ್ತುಗಳ ಸು. 400' ಎತ್ತರದ, ಅದರ ಮೇಲೆ 45'; ಎತ್ತರದ ಕಂಬವಿದ್ದ ಮರದ ಪಗೋಡ ನಿರ್ಮಿತವಾಯಿತು. ಕಂಬದ ತುದಿಯಲ್ಲಿ ಚಿನ್ನದ ಕಲಶವಿತ್ತು. ಪಗೋಡದ ನಾಲ್ಕು ಪಾಶ್ರ್ವಗಳಲ್ಲಿ ಒಂದೊಂದು 140' ಉದ್ದವಿತ್ತು. ಪ್ರತಿಯೊಂದು ಪಾಶ್ರ್ವದಲ್ಲೂ ಮೂರು ಬಾಗಿಲುಗಳೂ ಆರು ಕಿಟಕಿಗಳು ಇದ್ದುವು. ಬಾಗಿಲುಗಳಿಗೆ ಕೆಂಪು ಅರಗನ್ನು ಲೇಪಿಸಲಾಗಿತ್ತು. ಅವನ್ನು ಚಿನ್ನದ ಮೊಳೆಗಳಿಂದ ಭದ್ರಪಡಿಸಲಾಗಿತ್ತು. ಪ್ರತಿ ಅಂತಸ್ತಿನ ಮೂಲೆಗಳಲ್ಲೂ ಬೃಹದಾಕಾರದ ಚಿನ್ನದ ಗಂಟೆಗಳು ತೂಗುತ್ತಿದ್ದುವು. ಪಗೋಡದ ಉತ್ತರ ದಿಕ್ಕಿನಲ್ಲಿ ರಾಜಾಸ್ಥಾನದ ದರ್ಬಾರ್ ಹಜಾರವನ್ನು ಹೋಲುತ್ತಿದ್ದ ಬುದ್ಧ ಹಜಾರವಿತ್ತು. ಅದರ ಮಧ್ಯದಲ್ಲಿ 18' ಎತ್ತರದ ಚಿನ್ನ ಬುದ್ಧ ಪ್ರತಿಮೆಯೂ ಜೀವಂತ ಮಾನವ ಗಾತ್ರದ ಹತ್ತು ಸುವರ್ಣ ವಿಗ್ರಹಗಳೂ ಸ್ಥಾಪಿತವಾಗಿದ್ದುವು. ಅದರ ಪಾಶ್ರ್ವದಲ್ಲಿ ಗೋಪುರಗಳಿಂದ ಅಲಂಕೃತವಾದ ಭಿಕ್ಷುಗಳ ವಾಸದ ಕೋಣೆಗಳನ್ನು 100ರ ಸರಣಿಗಳಲ್ಲಿ ನಿರ್ಮಿಸಲಾಗಿತ್ತು. ಅದರ ನಾಲ್ಕು ಪಾಶ್ರ್ವಗಳಲ್ಲೂ ಒಂದೊಂದು ಬಾಗಿಲಿತ್ತು. ದಕ್ಷಿಣ ಭಾಗದಲ್ಲಿ ಮೂರು ದ್ವಾರಗಳೂ ಅವುಗಳ ಮೇಲೆ ಮೂರಂತಸ್ತುಗಳ ಗೋಪುರವೂ ಇದ್ದುವು. 200' ಎತ್ತರದ ಆ ಗೋಪುರ ಅರಮನೆಯ ಹೊರದ್ವಾರವನ್ನು ಹೋಲುತ್ತಿತ್ತು.

	ಚೀನೀಯರು ಕುಷಾನ್ ದೊರೆ ಕಾನಿಷ್ಕನ ಪೆಷಾವರ್ ಸ್ತೂಪದ ಮಾದರಿಯಲ್ಲಿ ತಮ್ಮ ಪಗೋಡಗಳನ್ನು ನಿರ್ಮಿಸುತ್ತಿದ್ದರು. ಕೆಳಗಿನ ಅಂತಸ್ತಿನ ಮಾದರಿಯಲ್ಲಿ ಅದರೆ ಸುಣ್ಣ ಪ್ರಮಾಣದಲ್ಲಿ ಮೇಲಂತಸ್ತನ್ನೂ ಅದಕ್ಕಿಂತ ಸಣ್ಣದಾಗಿ ಅದರ ಮೇಲಂತಸ್ತನ್ನೂ ನಿರ್ಮಿಸಿ ಎಲ್ಲಕ್ಕೂ ಮೇಲೆ ಎತ್ತರವಾದ ಕಂಬದ ಮೇಲೆ ಛತ್ರಾವಳಿಗಳನ್ನು ರೂಪಿಸುತ್ತಿದ್ದರು.

	ಆಯಾಕಾರದ ಅನೇಕ ಅಂತಸ್ತುಗಳ ಪಗೋಡ ಗವಲ್ಲದೆ ಭಾರತದ ಗುಪ್ತ ಚಕ್ರವರ್ತಿಗಳ ಕಾಲದ ಮಂದಿರಗಳ ಮಾದರಿಯಲ್ಲಿ ಕಟ್ಟಡಗಳನ್ನು 6ನೆಯ ಶತಮಾನದಲ್ಲಿ ನಿರ್ಮಿಸಲಾಯಿತು. ಹೋನ್ಯಾನ್ ಪ್ರಾಂತ್ಯದ ಸುಮಗ್ ಪರ್ವತದ ಮೇಲಿರುವ ಸುಂಗ್-ಯು-ಸ್ಸುನಲ್ಲಿರುವ ಹನ್ನೆರಡು ಮೂಲೆಗಳಿರುವ 15 ಅಂತಸ್ತುಗಳ ಪಗೋಡ ಎತ್ತರವಾದ ಸರಳ ವೇದಿಕೆಯ ಮೇಲೆ ನಿಂತಿದೆ. ಅದರ ಪ್ರತಿಯೊಂದು ಮೂಲೆಯಲ್ಲೂ ಕಂಬಗಳಿವೆ. ಮೇಲಿನ ಅಂತಸ್ತುಗಳ ಕ್ರಮೇಣ ಚಿಕ್ಕವಾಗುತ್ತ ಹೋಗಿವೆ. ತುದಿಯಲ್ಲಿ ಛತ್ರಾವಳಿ ಇದೆ. ಅದರ ವೈಯಕ್ತಿಕ ಅಲಂಕರಣದ ಅಂಶಗಳಲ್ಲಿ ಭಾರತೀಯ ಪ್ರಭಾವಗಳು ಸ್ಪಷ್ಟವಾಗಿವೆ. ಇಂಥ ಪಗೋಡಗಳು ಅಲ್ಲಿಲ್ಲಿ ಕಾಣಬರುತ್ತವೆ. ಭಾರತೀಯ ಸ್ತೂಪದ ಮಾದರಿಯ ಕಟ್ಟಡಗಳು ಜನಪ್ರಿಯವಾಗಿದ್ದುವು. ಆನೇಕ ಕಟ್ಟಡಗಳ ಅಲಂಕರಣದಲ್ಲಿ ಇಂಥ ಸ್ತೂಪದ ಉಬ್ಬುಚಿತ್ರಗಳ ಮಾದರಿಗಳನ್ನು ಕೆತ್ತಲಾಗಿದೆ.

	ಚೀನದ ಪಗೋಡ ಮತ್ತು ಬುದ್ಧ ಹಜಾರಗಳ ಮಾಲಿಕೆಗೆ ಸೇರಿದಂತೆ ಭಿಕ್ಷುಗಳ ಸಭೆ ಮತ್ತು ಧಾರ್ಮಿಕ ಗೋಷ್ಠಿಗಳಿಗೆ ಮೀಸಲಾದ ಉಪನ್ಯಾಸ ಮಂದಿರಗಳನ್ನು ನಿರ್ಮಿಸಲಾಗುತ್ತಿತ್ತು.

	ಸುಯಿ (581-618) ಮತ್ತು ಟ್ಯಾಂಗ್ (618-906) ವಂಶಗಳ ದೊರೆಗಳು ಚೀನವನ್ನು ಪುನಃ ಒಂದುಗೂಡಿಸಿ ಸಾರ್ವಭೌಮತ್ವವನ್ನು ಸ್ಥಾಪಿಸಿದ ಅನಂತರ ಬೌದ್ಧಧರ್ಮಕ್ಕೂ ತತ್ಸಂಬಂಧವಾದ ವಾಸ್ತುಕಲೆಗೂ ಅಮಿತ ಪ್ರೋತ್ಸಾಹ ದೊರಕಿತು. ಹೊಸ ತಂತ್ರ ಮತ್ತು ಪರಿಪಕ್ಪವಾದ ಸೌಂದರ್ಯಪೂರ್ಣ ಶೈಲಿ ಬಳಕೆಗೆ ಬಂದುವು.

	ಲೋಯಾಂಗ್ ನಗರ ನಿರ್ಮಿಸಿದ ವಾಸ್ತುಶಿಲ್ಪಿ ಯಾಂಗ್ಸ್-ಸ್ಸು ಮತ್ತು ಯು-ವೆನ್ಕಾಯ್ ಇವರಿಬ್ಬರೂ ಈ ಹೊಸ ಶೈಲಿಯ ಹೊಸ ವಾಸ್ತುಕಲಾಯುಗದ ನಿರ್ಮಾಪಕರು. ಟ್ಯಾಂಗ್ ದೊರೆಗಳ ಆಶ್ರಯದಲ್ಲಿ 7ನೆಯ ಶತಮಾನದಲ್ಲಿ ವಾಸ್ತು ನಿರ್ಮಾಣದಲ್ಲಿ ಹೊಸ ಪ್ರಯೋಗಗಳು ನಡೆದು ಉತ್ತಮ ಕಟ್ಟಡಗಳು ನಿರ್ಮಿತವಾದುವು. 845 ರಲ್ಲಿ ಬೌದ್ಧಧರ್ಮಕ್ಕೆ ರಾಜಾಶ್ರಯ ತಪ್ಪಿ ಕಿರುಕುಳ ಉಂಟಾದಾಗ ಈ ಅಸಂಖ್ಯಾತ ಸುಂದರ ಕಟ್ಟಡಗಳು ಬಹುತೇಕ ನಾಶಗೊಂಡುವು. ತರುವಾಯ ಆ ಧರ್ಮದತ್ತ ರಾಜದೃಷ್ಟಿ ಹೊರಳಿದಾಗ ಮತ್ತೆ ಅನೇಕ ಸುಂದರ ಮಂದಿರಗಳ ನಿರ್ಮಾಣವಾಯಿತು.

	ಹೊಸ ರಾಜಧಾನಿ ಚಾಂಗ್-ಅನ್ ನಗರ ಆಯಾಕಾರವಾಗಿತ್ತು. ಮತ್ತು ನೇರವಾದ ಮುಖ್ಯ ಮತ್ತು ಅಡ್ಡರಸ್ತೆಗಳಿಂದಲೂ ಬೃಹತ್ತಾದ ರಕ್ಷಣಾ ಕೋಟೆಯಿಂದಲೂ ಕೂಡಿತ್ತು. ಅದರ ವಿಸ್ತೀರ್ಣ 4 ಳಿ x 3 3/4ಚ.ಮೈ. ಅದರ ಹಿಂಬದಿಯ 5/2 ಭಾಗ ರಾಜಮನೆತನದವರ ವಸತಿಗಳಿಗೆ ಮೀಸಲಾಗಿತ್ತು. ಆ ಭಾಗದಲ್ಲಿ ರಾಜ್ಯದ ಕಚೇರಿಗಳೂ ಅರ್ಧ ಭಾಗವನ್ನಾಕ್ರಮಿಸಿಕೊಂಡ ಅರಮನೆಗಳೂ ಇದ್ದುವು. ಕೋಟೆಯ ಹೊರ ಭಾಗದಲ್ಲಿ ಈಶಾನ್ಯಕ್ಕೆ ಮತ್ತೊಂದು ದೊಡ್ಡ ಅರಮನೆ ಟಾ-ಮಿಂಗ್ ಇತ್ತು. ಈ ಅರಮನೆಗಳ ಪ್ರಧಾನ ಅಂಗಗಳೆಂದರೆ ಮೂರು ವಿಶಾಲ ಹಜಾರಗಳು. ಈ ವಿಶಾಲ ಹಜಾರಗಳು 345' x 176' ವಿಸ್ತೀರ್ಣವಾಗಿಯೂ 120' ಎತ್ತರವಾಗಿಯೂ ಇದ್ದುವು ಬೌದ್ಧ ವಾಸ್ತು ಈ ಕಾಲದಲ್ಲಿ ಪರಮೋಚ್ಚ ಶಿಖರ ಮುಟ್ಟಿತು. ಸುಯಿ ಅರಸರ ಆಶ್ರಯದಲ್ಲಿ ಅನೇಕ ಧಾರ್ಮಿಕ ಮಂದಿರಗಳು ನಿರ್ಮಾಣವಾಗಿ ವಾಸ್ತುಶೈಲಿಯಲ್ಲಿ ಹೊಸದೊಂದು ರಾಷ್ಟ್ರೀಯ ಶೈಲಿ ಬೆಳೆಯಿತು. ಈ ಕಟ್ಟಡಗಳು ಈಗ ನಾಶವಾಗಿದ್ದರೂ ಇವನ್ನು ಅನುಕರಿಸಿ ನಿರ್ಮಿತವಾದ ಜಪಾನೀ ಮಂದಿರಗಳ ಅವಶೇಷಗಳಿಂದ ಇವುಗಳ ಲಕ್ಷಣಗಳನ್ನು ಊಹಿಸಲಾಗಿದೆ. ವಿಶಾಲವಾದ ಪ್ರಾಂಗಣದ ಎರಡು ತುದಿಗಳಲ್ಲೂ ಎರಡು ದೊಡ್ಡ ಪಗೋಡಗಳನ್ನು ನಿರ್ಮಿಸಿ ಮಧ್ಯ ಮುಂಭಾಗದಲ್ಲಿ ಬೃಹತ್ಪ್ರಮಾಣದ ಬುದ್ಧ ಹಜಾರವನ್ನು ನಿರ್ಮಿಸಲಾಗುತ್ತಿತ್ತು. ಇದರಿಂದ ಪಗೋಡಗಳಿಗಿಂತ ಬುದ್ಧ ಹಜಾರಕ್ಕೆ ಹೆಚ್ಚು ಪ್ರಧಾನ್ಯ ದೊರಕುತ್ತಿತ್ತು. ಪಗೋಡಗಳಲ್ಲಿ ಒಟ್ಟು 325' ಎತ್ತರದ ಏಳು ಅಂತಸ್ತುಗಳಿದ್ದುವು. ಪ್ರಾಕಾರದಲ್ಲಿ ಮಹಾದ್ವಾರ. ವರಾಂಡ ಮತ್ತು ಹಜಾರಗಳಿದ್ದುವು.

	ಈ ಶೈಲಿಯ ಎರಡು ಗಮನಾರ್ಹ ಅಂಶಗಳೆಂದರೆ, ಪಗೋಡಗಳು ಎರಡು ತುದಿಗಳಲ್ಲಿ ಕಟ್ಟುವುದರಿಂದ ಚೀನೀ ಅರಮನೆಗಳ ಸಿಂಹಾಸನದ ಹಜಾರವನ್ನು ಹೋಲುವಂತೆ ಬುದ್ಧ ಹಜಾರದ ಪ್ರಾಮುಖ್ಯವನ್ನು ಎತ್ತಿತೋರಿಸಲಾಗಿತ್ತು. ಧಾರ್ಮಿಕ ಆವಶ್ಯಕತೆಗಳಿಗಿಂತ ಚೀನೀ ರಾಷ್ಟ್ರೀಯ ಮನೋಭಾವಕ್ಕೆ ಆದ್ಯತೆ ನೀಡಿ ಭಾರತೀಯ ಮೂಲದ ವಿದೇಶೀ ಶೈಲಿಯನ್ನು ರಾಷ್ಟ್ರೀಕರಿಸಲಾಯಿತು. ಇದರಿಂದ ಪಗೋಡಗಳ ನಿರ್ಮಾಣದ ಖರ್ಚು ಹೆಚ್ಚುವಂತಾಯಿತು. ಟಾಮಗ್ ದೊರೆಗಳ ಆಶ್ರಯದಲ್ಲಿ ಮತ್ತೊಂದು ಹೊಸ ಕಟ್ಟಡದ ಮಾದರಿಗೆ ಆದ್ಯತೆ ನೀಡಲಾಯಿತು. ಪಗೋಡದ ಮತ್ತು ಬುದ್ಧ ಹಜಾರಗಳೀಗಿಂತ ಅಲಂಕೃತ ಆವರಣಗಳು-ಕೋ-ಹೆಚ್ಚುಹೆಚ್ಚಾಗಿ ನಿರ್ಮಿತವಾದುವು. ಪ್ರಸಿದ್ಧ ಆವರಣವೊಂದು ಒಂಬತ್ತು ಅಂಕಣಗಳಷ್ಟು ವಿಶಾಲವೂ ಮೂರು ಅಂತಸ್ತುಗಳಲ್ಲಿ 100' ಎತ್ತರವೂ ಆಗಿತ್ತು. 820ರ ಸುಮಾರಿನಲ್ಲಿ ರಾಜಧಾನಿಯ ಮುಖ್ಯ ದೇವಾಲಯದ ಆವರಣ ವಿಶ್ವದಲ್ಲಿ ಅತಿ ದೊಡ್ಡದಾಗಿತ್ತೆಂದು ಹೇಳಲಾಗಿದೆ.

	ವು ಚಕ್ರವರ್ತಿನಿಯ ಇಚ್ಛೆಯಂತೆ 688ರಲ್ಲಿ ಲೋಯಾಂಗ್‍ದಲ್ಲಿ ನಿರ್ಮಿಸಲಾದ ಮಿಂಗ್-ಟಾಂಗ್ ಗಮನಾರ್ಹವಾದ್ದು. ಮೂರು ಅಂತಸ್ತುಗಳಲ್ಲಿ ಈ ಕಟ್ಟಡದ ಎತ್ತರ 294' ಒಂದೊಂದು ಪಾಶ್ರ್ವದ ಉದ್ದ 300' ಮೊದಲ ಅಂತಸ್ತು ವರ್ಷದ ನಾಲ್ಕು ಋತುಗಳನ್ನು ಎರಡನೆಯದು ಹನ್ನೆರಡು ಮಾಸಗಳನ್ನೂ ಮೇಲಿನದು ವರ್ಷದ 24 ಸೌರಮಾನ ವಿಭಾಗಗಳನ್ನೂ ಪ್ರತಿನಿಧಿಸುತ್ತಿದ್ದುವು. ತುದಿಯಲ್ಲಿ 10' ಎತ್ತರದ ಕಬ್ಬಿಣದ ಫೀನಿಕ್ಸ್ ಪಕ್ಷಿಯ ವಿಗ್ರಹ ಇಡಲಾಗಿತ್ತು. ಕಟ್ಟಡದ ಅಡಿಯಿಂದ ತುದಿಯವರೆಗೂ 10 ಗೇಣು ದಪ್ಪದ ಮರದ ಕಂಬವಿತ್ತು. ಸ್ತೂಪಗಳ ಮಧ್ಯ ಭಾಗದಲ್ಲಿ ಭುವನತ್ರಯದ ಆಧಾರಸ್ತಂಭವೆಂದು ಪರಿಗಣಿಸಲಾದ ಕಂಬದ ಮಾದರಿಯಲ್ಲಿ ಇದನ್ನು ರೂಪಿಸಲಾಗಿತ್ತು. ವು ಚಕ್ರವರ್ತಿಯ ಕಾಲದ ಮತ್ತೊಂದು ಪ್ರಮುಖ ನಿರ್ಮಾಣವೆಂದರೆ ದೇವರ ಹಜಾರ. ಐದು ಅಂತಸ್ತುಗಳ ಗೋಪುರವಿದ್ದ ಈ ಕಟ್ಟಡದಲ್ಲಿ ಬೃಹತ್ತಾದ ಬುದ್ಧ ವಿಗ್ರಹವನ್ನಿಡಲಾಗಿತ್ತು. ಮತ್ತೊಂದು ಗಮನಾರ್ಹ ನಿರ್ಮಾಣವೆಂದರೆ ಸುತ್ತುವ ಆವರಣ. ಒಮ್ಮೆಗೆ ನೂರಾರು ಅತಿಥಿಗಳು ಕೂಡಬಹುದಾದ ಈ ಭವನವನ್ನು ಅದರ ತಳಭಾಗದಲ್ಲಿದ್ದ ಯಂತ್ರದ ಸಹಾಯದಿಂದ ಸುತ್ತು ತಿರುಗಿಸಬಹುದಾಗಿತ್ತು.

	ಟಾಂಗ್ ಕಾಲದಿಂದ ಉಳಿದು ಬಂದಿರುವ ಪಗೋಡಗಳ ಅವಶೇಷಗಳು ಸಾಮಾನ್ಯವಾಗಿ ಇಟ್ಟಿಗೆಯ ಕಟ್ಟಡಗಳು, ಬೌದ್ಧ ಸ್ತೂಪದ ಚೀನೀ ಪ್ರಭೇದವನ್ನು ಪಗೋಡದ ಮೂಲರೂಪದಲ್ಲಿ ಸರಳ ಮುನ್‍ಚಾಚಿದ ಕಪೋತ. ಅದರ ಮೇಲೆ ಹೆಚ್ಚು ಕಡಿಮೆ ಗೋಪುರಾಕಾರದ ನಿರ್ಮಾಣ, ಮೇಲ್ತುದಿಯಲ್ಲಿ ಶಿಖರ-ಇದೇ ಮುಖ್ಯಾಂಶಗಳು. ಹೊನ್ಯಾನ್‍ನ ಸುಂಗ್ ಪರ್ವತದಲ್ಲಿರುವ, 791ರಲ್ಲಿ ಮರಣಹೊಂದಿದ ಧ್ಯಾನಿ ಸಂತ ಫಾ-ಯುಆನ್‍ನ ಸಮಾಧಿ ಪಗೋಡ ಈ ರೀತಿಯದು. ಟಾಂಗ್ ಕಾಲದಲ್ಲಿ ಇದರ ಸುಧಾರಿಸಿದ ಆವೃತ್ತಿ ಬಳಕೆಗೆ ಬಂತು. ಹೆಂಚುಗಳ ಚಾವಣಿಯನ್ನು ನಿರ್ಮಿಸಲಾಯಿತು. ಬಾಗಿಲುವಾಡದ ಮೇಲೆ ಚೂಪಾದ ಕಮಾನಿನಾಕೃತಿಯನ್ನು ಬಾಗಿಲ ಪಾಶ್ರ್ವಗಳಲ್ಲಿ ದ್ವಾರಪಾಲಕರ ವಿಗ್ರಹಗಳನ್ನೂ ಸೇರಿಸಲಾಯಿತು. ಪೀಕಿಂಗಿನ ನೈಋತ್ಯಕ್ಕಿರುವ ಫ್ಯಾಂಗ್ ಪರ್ವತದ ಮೇಲಿರುವ ಪಗೋಡ ಇದಕ್ಕೆ ನಿದರ್ಶನ. ಇದರ ಮುಂದಣ ಹೆಜ್ಜೆಯೆಂದರೆ ಸಾಮಾನ್ಯವಾಗಿ ಶಿಖರದಲ್ಲಿರುವ ಪರಸ್ಪರ ನಿಕಟವಾದ ಏಳು ಮಾಡಗಳ ನಿರೂಪಣೆ. ಲಿಯಾವೋ ವಂಶದ ಕಾಲಕ್ಕೆ ಸೇರಿದ (907-1125) ಯುನ್-ಚು-ಸ್ಸು ಎಂಬಲ್ಲಿಯ ಇಟ್ಟಿಗೆಯ ಪಗೋಡದ ವಿಶಾಲ ಆಯಾಕಾರದ ವೇದಿಕೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಪಗೋಡಗಳನ್ನು ಕಟ್ಟಲಾಗಿದೆ. ಭಾರತದ ಬೋಧಗಯೆಯಲ್ಲಿರುವ ಮಹಾಬೋಧಿ ಸ್ತೂಪದ ಮಾದರಿಯಲ್ಲಿ, ಬೌದ್ಧ ಧರ್ಮದಲ್ಲಿ ಹೇಳಲಾಗಿರುವ ಮಧ್ಯದ ಮತ್ತು ನಾಲ್ಕು ದಿಕ್ಕುಗಳ ಲೋಕಗಳನ್ನು ಇದು ಪ್ರತಿಬಿಂಬಿಸುತ್ತದೆ. ಸಮತಲ ಪ್ರದೇಶದಿಂದ ಆಕಾಶದತ್ತ ರಮ್ಯವಾದ ಡೊಂಕಿನಾಕಾರದಲ್ಲಿ ಪಗೋಡ ಪ್ರಮಾಣ ಬದ್ಧವಾಗಿದೆ. ತನ್ನ ಮೃತಪತಿಯ ಸ್ಮಾರಕಾರ್ಥವು ಚಕ್ರವರ್ತಿನಿ 684ರಲ್ಲಿ ಚಾಂಗ್-ಅನ್ ನಲ್ಲಿ ಕಟ್ಟಿಸಿದ ಪಗೋಡದಲ್ಲಿ ಮೊದಲು 18 ಮಾಡುಗಳಿದ್ದುವು. ಮೇಲಿನ ಎರಡು ಮಾಡಗಳು ಬಿದ್ದುಹೋದ ಅನಂತರ ಅದರ ಎತ್ರ 125'. ಯುನ್ಯಾನ್ ಪ್ರಾಂತ್ಯದ ಟಾ-ಲಿ-ಪು ನಲ್ಲಿರುವ ಹದಿನಾರು ಮಾಡಗಳ ಬೃಹತ್ ಚೌಕಾಕಾರದ ಶಿಖರದ ಎತ್ರರ 330'. ಇದರ ಕಾಲ ಬಹುಶಃ 9ನೆಯ ಶತಮಾನ.

	10ನೆಯ ಶತಮಾನದ ಮರದ ಕಟ್ಟಡಗಳ ಸೌಂದರ್ಯಾಭಿರುಚಿ ದೇಶಾದ್ಯಂತ ಜನಪ್ರಿಯವಾಯಿತಲ್ಲದೆ ಕಲ್ಲು ಇಟ್ಟಿಗೆಗಳ ನಿರ್ಮಾಣಗಳಲ್ಲೂ ಇದು ಅಭಿವ್ಯಕ್ತವಾಗಲಾರಂಭಿಸಿತು. 7ನೆಯ ಶತಮಾನದ ಕೊನೆಯಲ್ಲಿ ನಿರ್ಮಿತವಾದ. ಹ್ಸಿಯಾಂಗ್- ಚಿ-ಸ್ಸುನಲ್ಲಿರುವ ಇಟ್ಟಿಗೆಯ ದೊಡ್ಡ ಗೋಪುರದಲ್ಲಿ ಪ್ರತಿಯೊಂದು ಮಾಡದ ಮೇಲೂ ಪ್ರತ್ಯೇಕ ಅಂತಸ್ತುಗಳಿವೆ. ಮರದ ಮಾದರಿಗಳ ಅನುಕರಣೆಯೆಂಬಂತೆ ಮಾಡಗಳ ಅಂತರದಲ್ಲಿ ಗೋಡೆಗಂಬಗಳನ್ನು, ಬೋದಿಗೆಗಳನ್ನು ರೂಪಿಸಲಾಗಿದೆ. ಹ್ಯೂ-ಎನ್-ತ್ಸಾಂಗನ ಸ್ವಂತ ಊರಿನಲ್ಲಿರುವ ಟಿಯೆನ್-ಟ ಪಗೋಡದಲ್ಲಿ ಈ ಅಂಶ ಎದ್ದು ಕಾಣುತ್ತದೆ. ಮರದಲ್ಲಿ ನಿರ್ಮಿಸಿದ ಪಗೋಡಗಳ ಮಾದರಿಯಲ್ಲಿ, ಮೇಲಕ್ಕೆ ಹೋದಂತೆ ಕ್ರಮೇಣ ಸಣ್ಣದಾಗುವ ಏಳು ಅಂತಸ್ತುಗಳೂ ಇವೆ. ಮುನ್‍ಚಾಚಿದ ಸೂರುಗಳಿದ್ದರೂ, ಉದ್ದವೂ ಚಪ್ಪಟೆಯೂ ಆದ ಗೋಡೆಗಂಬಗಳಿವೆ. ಮೆಟ್ಟಿಲು ಮೆಟ್ಟಿಲಾಗಿ ಮೇಲೇರುವ ಆಯಾಕಾರದ ಪಿರಮಿಡ್ಡಿನಂತೆ ಈ ಕಟ್ಟಡಗಳು ಘನತ್ವವನ್ನು ಸೂಚಿಸುತ್ತವೆ. 175' ಎತ್ತರದ ಐದು ಅಂತಸ್ತುಗಳ ಟು-ಯೆನ್-ಟವನ್ನು 652ರಲ್ಲಿ ಮೊದಲಿಗೆ ನಿರ್ಮಿಸಲಾಯಿತು. 701-705ರಲ್ಲಿ ಅದರ ಜೀರ್ಣೋದ್ಧಾರವಾದಾಗ ಅದರಲ್ಲಿ 190' ಎತ್ತರದ ಏಳು ಅಂತಸ್ತುಗಳಾದುವು.

	ಇದೇ ಸುಮಾರಿನಲ್ಲಿ ಪಗೋಡದ ನಿರ್ಮಾಣದಲ್ಲಿರುವ ಇನ್ನೆರಡು ಬದಲಾವಣೆಗಳು ಗಮನಾರ್ಹ. ಆಧುನಿಕ ಹ್ಸಿ-ಅನ್-ಪು ಬಳಿ ನಿರ್ಮಿಸಿದ ಹ್ಯೂ-ಎನ್-ತ್ಯಾಂಗನ ಸಮಾಧಿಗೆ ಐದು ಅಂತಸ್ತುಗಳಿವೆ. ಗೋಡೆಯನ್ನು ವಿಭಾಗಿಸುವ ಉದ್ದಗೋಡೆಗಂಬಗಳು ಎಂಟು ಮೂಲೆಗಳ ಮರದ ಕಂಬಗಳನ್ನು ಹೋಲುತ್ತವೆ. ಅವುಗಳ ಮೇಲಿನ ಬೋದಿಗೆಗಳು ಲಂಬಿತವಾಗಿದ್ದು, ಅಡ್ಡತೊಲೆಗಳಿಗೆ ಆಧಾರವಾಗಿರುವಂತೆ ಮರದ ವಾಸ್ತುಶಿಲ್ಪ ಲಕ್ಷಣಗಳನ್ನು ಪ್ರದರ್ಶಿಸುತ್ತವೆ. 669ರಲ್ಲಿ ನಿರ್ಮಿತವಾದ ಈ ಕಟ್ಟಡ 828ರ ಸುಮಾರಿನಲ್ಲಿ ಅಥವಾ 1175ರಲ್ಲಿ ಚಿನ್ ದೊರೆಗಳ ಆಶ್ರಯದಲ್ಲಿ ಪುನರ್ನಿಮಿತವಾದಾಗ ಈ ಲಕ್ಷಣಗಳನ್ನು ಅಳವಡಿಸಿರಬಹುದು.	

	ಷ್ಯಾನ್‍ಟಂಗ್‍ನ ಷೆನ್-ಟಿಂಗ್-ಸ್ಸು ಪಗೋಡದಲ್ಲಿ ಅನಂತರದ ಕಾಲದ ಸುಂಗ್ ವಾಸ್ತುಶೈಲಿಯನ್ನು ಹೋಲುವ ಲಕ್ಷಣಗಳು ಪ್ರಧಾನವಾಗಿವೆ. ಇದು ಚೀನೀ ವಾಸ್ತುಶಿಲ್ಪದ ಮುನ್ನಡೆಯ ಹಂತವನ್ನು ಪ್ರತಿನಿಧಿಸುತ್ತದೆ. ಹೋನ್ನಾನ್ ಪ್ರಾಂತ್ಯದ ಸುಂಗ್ ಪರ್ವತದ ಮೇಲಿನ ಹುಯಿ-ಷಾನ್-ಸ್ಸುದ ಪ್ರಾಕಾರದಲ್ಲಿರುವ ಧ್ಯಾನಿ ಸಂತ ಚಿಂಗ್-ತ್ಸಾಂಗ್‍ನ ಸಮಾಧಿ ಪಗೋಡ ಮತ್ತೊಂದು. ಇದರ ಕಾಲ ನಿರ್ದಿಷ್ಟವಾಗಿಲ್ಲ. ಇದು ಮರ ಮತ್ತು ಕಲ್ಲಿನ ಕಟ್ಟಡಗಳ ಲಕ್ಷಣಗಳನ್ನೊಳಗೊಂಡಿದೆ. ಕಂಬಗಳು ಸರಳವಾಗಿದ್ದರೂ ಅಷ್ಟಕೋನದ ಕಂಬಗಳ ಅನುಕರಣೆಯಾಗಿದೆ. ಬಾಗಿಲು ಮತ್ತು ಕಿಟಕಿಗಳ ನಿರೂಪಣೆಯಲ್ಲೂ ಈ ಅನುಸರಣೆ ಕಾಣಬರುತ್ತದೆ. ಹ್ಯೂ-ಎನ್-ತ್ಸಾಂಗ್ ಸಮಾಧಿಯ ಪ್ರತಿಬಿಂಬವನ್ನಿಲ್ಲಿ ಕಾಣಬಹುದಾದರೂ ಕಮಲದಳಗಳ ಸೂರುಗಳ ಮೇಲಿರುವ ಶಿಖರದ ನಿರೂಪಣೆಯಲ್ಲಿ ಭಾರತದ ದೇವಾಲಯ ಶಿಖರಗಳ ಛಾಯೆ ಕಂಡುಬರುತ್ತದೆ.

	ಟಾಂಗ್ ಕಾಲದಿಂದ ಉಳಿದುಬಂದಿರುವ 9ನೆಯ ಶತಮಾನದ ಮರದ ಪಗೋಡ ಫೊ-ಕುಅಂಗ್-ಸ್ಸು ಒಂದು ಸುಂದರ ನಿರ್ಮಾಣ. ಇದು ಚೀನೀ ವಾಸ್ತುಕಲೆಯ ಇತಿಹಾಸದಲ್ಲಿ ಒಂದು ಪ್ರಮುಖ ಹಂತವನ್ನೂ ಸೂಚಿಸುತ್ತದೆ. ಮುನ್‍ಚಾಚಿದ ಸೂರುಗಳು, ಅಷ್ಟಸ್ರಾಕೃತಿಯ ಶಿಖರಗಳು ಉಳ್ಳ ಒಂದಂತಸ್ತಿನ ಈ ಪಗೋಡದ ಮೂಲವನ್ನು ಭಾರತದ ಅಜಂತದಲ್ಲಿ ಗುಪ್ತ ದೊರೆಗಳ ಕಾಲದ ಸ್ತೂಪಗಳಲ್ಲಿ ಕಾಣಬಹುದು. ಇದು 8ನೆಯ ಶತಮಾನದಲ್ಲಿ ಹೊಸ ತಾಂತ್ರಿಕ ಬೌದ್ಧ ಪಂಥದ ಪ್ರಭಾವದೊಂದಿಗೆ ಚೀನವನ್ನು ಪ್ರವೇಶಿಸಿತು. ಈ ಪಗೋಡದ ಪ್ರತಿಬಿಂಬದಂತಿರುವ ಅನೇಕ ಮಂದಿರಗಳನ್ನು ಜಪಾನಿನಲ್ಲಿ 10-11ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ.

	ಹೋಪೇ ಪ್ರಾಂತ್ಯದ ಚೆಂಗ್-ಟೆಂಗ್-ಹ್ಸಿಯೆನ್‍ನಲ್ಲಿರುವ ಕಾನ್‍ಫ್ಯೂಷಸ್ ಮಂದಿರ ಚೀನದಲ್ಲಿರುವ ಟಾಂಗ್ ಕಾಲದ ಮತ್ತೊಂದು ಮರದ ಕಟ್ಟಡ. ಇದು ಪೊ-ಕುಅಂಗ್-ಸ್ಸು ಮಂದಿರಕ್ಕಿಂತ ಬಹಳ ಭಿನ್ನವಾದ್ದು. ದಪ್ಪ ಇಟ್ಟಿಗೆ ಗೋಡೆಗಳ ಈ ಸಣ್ಣ ಕಟ್ಟಡದಲ್ಲಿ ಕಂಬಗಳಿಂದ ಬೇರ್ಪಡಿಸಿದ ಇಕ್ಕಟ್ಟಾದ ಅಂಕಣಗಳಿವೆ. ಒಳಭಾಗಗಳ ಎತ್ತರ, ಚಾವಣಿಯ ಇಳಿಜಾರು. ಇವು ಈ ಕಟ್ಟಡದಲ್ಲಿ ಪ್ರಧಾನ. ಅನಂತರಕಾಲದ ಸುಂಗ್ ಶೈಲಿಯ ಪೂರ್ವ ಪೀಠಿಕೆಯಂತಿರುವ ಈ ಕಟ್ಟಡದಲ್ಲಿ ಆ ಶೈಲಿಗೆ ಹೊರತಾದ ಇತರ ಲಕ್ಷಣಗಳು ಕಂಡುಬರುವುದರಿಂದ ಇದನ್ನು ಪ್ರಾಚೀನ ಮತ್ತು ಅರ್ವಾಚೀನ ಶೈಲಿಗಳ ನಡುವಣ ಕೊಂಡಿಯೆಂದು ಪರಿಗಣಿಸಬಹುದು.

	ಹತ್ತನೆಯ ಶತಮಾನದ ಆದಿಭಾಗದಿಂದ ಆ ಶತಮಾನದ ಏಳನೆಯ ದಶಕದವರೆಗೆ ಆಳುತ್ತಿದ್ದ ಐದು ರಾಜವಂಶಗಳ ಆಳ್ವಿಕೆಯಲ್ಲಿ ಹೆಚ್ಚಿನ ಬದಲಾವಣೆಗಳ್ನೆನೂ ಆಗಲಿಲ್ಲ. ದಕ್ಷಿಣಭಾಗದ ಶಾಂತಿಯುತ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ವಾಸ್ತು ನಿರ್ಮಾಣ ಕಾರ್ಯ ನಡೆದು, ಬೌದ್ಧ ಮಂದಿರಗಳು ನಿರ್ಮಿತವಾದವು. ಆ ಕಾಲದ ಅನೇಕ ಮೋಹಕ ಪಗೋಡಗಳು ಜೀರ್ಣಾವಸ್ಥೆಯಲ್ಲಿ ಇನ್ನೂ ಉಳಿದುಬಂದಿದೆ. ಸುಂಗ್ ದೊರೆಗಳು ದೇಶದ ಐಕಮತ್ಯವನ್ನು ಸಾಧಿಸಿದ ಅನಂತರ ಮತ್ತೆ ವಾಸ್ತುಕಲೆ ಬೆಳೆಯಲಾರಂಭಿಸಿತು. ಹ್ಯಾಂಗ್-ಚೌ ನಗರದ ಯು-ಹಾವೊ ಆಕಾಲದ ಪ್ರಸಿದ್ಧ ವಾಸ್ತುಶಿಲ್ಪ ಸುಂಗ್ ದೊರೆಗಳ ಹೊಸ ರಾಜಧಾನಿ ಪಿಯೆನ್-ಚೆಂಗ್ (ಈಗಿನ ಹೋನ್ಯಾನ್ ಪ್ರಾಂತ್ಯದ ಕೈ-ಫೆಂಗ್-ಫು) ನಿರ್ಮಿತವಾಯಿತು. ಆ ಮೊದಲಿನ ರಾಜಧಾನಿ ಚಾಂಗ್-ಅನ್‍ಗಿಂತ ವಿಸ್ತಾರವಾದ ಈ ನಗರ ಚಚ್ಚೌಕವಾಗಿತ್ತು. ಇದರ ರಕ್ಷಣಾ ವ್ಯವಸ್ಥೆ ಸಮರ್ಪಕವಾಗಿಲ್ಲದ್ದರಿಂದ 1126ರಲ್ಲಿ ನಡೆದ ಚಿನ್-ತಾರ್ತರರ ದಾಳಿಗಳಲ್ಲಿ ಇದು ಭಸ್ಮವಾಯಿತು. ಇಲ್ಲಿದ್ದ ಅನೇಕ ದೇವಾಲಯಗಳಲ್ಲಿ, ಹ್ಸಿಯಂಗ್-ಕುವೊ-ಸ್ಸು ಎಂಬುದು ಟ್ಯಾಂಗ್ ಕಾಲದಿಂದ ಉಳಿದುಬಂದಿರುವ ಪ್ರಮುಖ ದೇವಾಲಯ. ಸುಂಗ್ ಕಾಲದಲ್ಲಿ ಬಹಳ ವಿಸ್ತøತಗೊಂಡ ಈ ಮಂದಿರದ ಎರಡು ತುದಿಗಳ ಪಗೋಡಗಳು ಮತ್ತು ಮಧ್ಯಭಾಗದ ಬುದ್ಧ ಹಜಾರ, ಗಂಟೆ ಸೂತ್ರದ ಗೋಪುರಗಳು ಗಮನಾರ್ಹವಾದವು.

	ಶಕ್ತಿಶಾಲಿ ವಿದೇಶಿ ಅಧಿಕಾರಷಾಹಿಯ ನೆರಳಿನಲ್ಲೆ ಬಾಳಬೇಕಾಗಿದ್ದುದರಿಂದ ಸುಂಗ್ ಕಾಲದಲ್ಲಿ ಕಲೆಗೆ ಹೆಚ್ಚಿನ ಗಮನ ದೊರಕಲಿಲ್ಲವೆಂದರೆ ತಪ್ಪಾಗಲಾರದು. ಆಗಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗನುಗುಣವಾಗಿ ವಿವೇಕಯುತ ಸಮತಾಪೂರ್ಣ ಜೀವನವನ್ನು ಪ್ರತಿನಿಧಿಸುವ ರೀತಿಯ ಕಟ್ಟಡಗಳೇ ಕಾಣಬರುತ್ತವೆ. ಆದರೆ 1014ರಲ್ಲಿ ನಿರ್ಮಿತವಾದ ಯು-ಚಿಂಗ್-ಚಾವೊ-ಯಿಂಗ್-ಕುಂಗ್ ಮಂದಿರ ಇದಕ್ಕೆ ಅಪವಾದವಾಗಿದೆ. ಸಾಮ್ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಅಪೂರ್ವ ವಸ್ತುಗಳಿಂದ ನಿರ್ಮಿಸಿದ ಈ ಕಟ್ಟಡ ಬಲು ದೊಡ್ಡದು. ಇದರಲ್ಲಿ ಹಜಾರಗಳೂ 2,620 ಕಂಬಗಳೂ ಇದ್ದುವು. ಈ ಭವ್ಯಮಂದಿರ ಕೆಲವೇ ವರ್ಷಗಳ ತರುವಾಯ ಅಗ್ನಿಗೆ ಅಹುತಿಯಾದ ಅನಂತರ ಅಷ್ಟು ದೊಡ್ಡ ನಿರ್ಮಾಣಗಳು ನಡೆಯಲಿಲ್ಲ. ಆದರೂ ಅನಂತರದ ಕಾಲದ ಹಲವಾರು ಕಟ್ಟಡಗಳು ಗಮನಾರ್ಹವಾಗಿ ದೊಡ್ಡವಾಗಿದ್ದುವು.	

	ಸುಂಗ್ ಕಾಲದ ವಾಸ್ತುಕಲೆಯಲ್ಲಿ ತಾಂತ್ರಿಕ ನೈಪುಣ್ಯ, ನಯಗಾರಿಕೆ ಇವೆ. ಚಾವಣಿಯ ಸೂರುಗಳನ್ನು ಬಳ್ಳಿಯಂತೆ ಡೊಂಕಾಗಿಸಿ ಅಂದವನ್ನು ಹೆಚ್ಚಿಸಲಾಗಿದೆ. 989ರಲ್ಲಿ ರಾಜಧಾನಿ ಪಿಯೆನ್‍ನಲ್ಲಿ ಯು-ಹಾವೆನ್ ನೇತೃತ್ವದಲ್ಲಿ ನಿರ್ಮಿತವಾದ ಪಗೋಡ ಅಷ್ಟಪ್ರಾಕರವಾಗಿ ಹನ್ನೊಂದು ಅಂತಸ್ತುಗಳಿಂದ ಕೂಡಿತ್ತು. ಅದರ ಎತ್ರರ ಸು. 360'. 1037ರಲ್ಲಿ ಅದು ಸುಟ್ಟು ಹೋಯಿತಾದರೂ 1072ರ ವೇಳೆಗೆ ಪುನರ್ನಿರ್ಮಿತವಾಯಿತು. ಆಗ ಅದರಲ್ಲಿ 9 ಅಂತಸ್ತುಗಳಿದ್ದುವು. ಅದರ ಎತ್ರ 220' ಅದರ ಒಳಭಾಗ ಪೂರ್ಣ ಟೊಳ್ಳಾಗಿತ್ತು. ಪಿಯೆನ್‍ನಲ್ಲಿ ಅನೇಕ ಗೋಪುರಗಳಿದ್ದುವು. ಹ್ಸಿಯೆಂಗ್-ಕುವೊ-ಸ್ಸುದ ಎರಡು ತುದಿಗಳಲ್ಲಿದ್ದ ಪಗೋಡಗಳ ಮತ್ತು ಮಧ್ಯದ ಬುದ್ಧ ಹಜಾರದ ಚಾವಣಿಗಳನ್ನು ಸೇತುವೆಗಳ ಮೂಲಕ ಸೇರಿಸಿದ್ದುದರಿಂದ ಮೂರು ಮಂದಿರಗಳಲ್ಲೂ ಒಟ್ಟಿಗೆ ಪೂಜೆ ಮಾಡಬಹುದಾಗಿತ್ತೆಂದು 1072ರಲ್ಲಿ ಅದನ್ನು ಸಂದರ್ಶಿಸಿದ ಜಪಾನೀ ಯಾತ್ರಿಕ ಜೋಜಿನ್ ತಿಳಿಸಿದ್ದಾನೆ. ಅದರ ಭವ್ಯ ಸುಂಪದ್ಭರಿತ ಸೌಂದರ್ಯದಿಂದ ದಿಗ್ಭ್ರಮೆಗೊಂಡ ಜೋಜಿನ್ ಅದು ಚಿನ್ನ, ಬೆಳ್ಳಿ ರತ್ನಗಳಿಂದ ಅಲಂಕೃತವಾದ ಅಪೂರ್ವ ಮಂದಿರವೆಂದು ತಿಳಿಸಿದ್ದಾನೆ. ಅಷ್ಟೇ ಸೌಂದಯ್ ಪೂರ್ಣವಾದ ಇತರ ಮಂದಿರಗಳು ಆ ನಗರದಲ್ಲಿ ಇದ್ದುವೆಂದು ಹೇಳಿದ್ದಾನೆ.

	ಜೋಜಿನ್ ವರ್ಣಿಸಿರುವ ಮತ್ತೊಂದು ಅಮೋಘ ನಿರ್ಮಾಣವೆಂದರೆ ಹುಅಯಿ ನದಿಯ ದಡದಲ್ಲಿರುವ ಪು-ಚಾವೊ-ವಾಂಗ್-ಸ್ಸು. ಅದರ ಚಾವಣಿಯನ್ನು ಹೊಳೆಯುವ ವರ್ಣರಂಜಿತ ಗಾಜಿನ ಹೆಂಚುಗಳಿಂದ ಮಾಡಲಾಗಿತ್ತು. ಬುದ್ಧ ಹಜಾರದ ಚಾವಣಿ ಹಳದಿಯದಾಗಿದ್ದರೆ ಅದರ ತಳಭಾಗ ಹಸಿರುಬಣ್ಣದ್ದಾಗಿತ್ತು. ಅದರ ಪ್ರಕಾರದ ನೆಲಗಟ್ಟು ಅಪೂರ್ವ ಶೋಭೆಯನ್ನು ನೀಡುತ್ತಿದ್ದ ಜೇಡ್ ಹಸಿರು ಮತ್ತು ಹಳದಿ ಹೆಂಚುಗಳಿಂದ ಕೂಡಿತ್ತು. ಅಷ್ಟಪ್ರಕಾರಗಳ 13 ಅಂತಸ್ತುಗಳ ಸು. 160' ಎತ್ತರದ ಈ ಸುಂದರ ನಿರ್ಮಿತಿ ಸುಂಗ್ ಕಟ್ಟಡಗಳ ಅಸಾಧಾರಣ ಚಾತುರ್ಯದ ಉತ್ತಮ ನಿದರ್ಶನವೆಂದು ಚೋಜಿನ್ ಅಭಿಪ್ರಾಯಪಟ್ಟಿದ್ದಾನೆ. ಪ್ರತಿ ಅಂತಸ್ತಿನ ಹೊರಭಾಗದಲ್ಲಿ ಬುದ್ಧ, ಬೋಧಿಸತ್ತ್ವ, ದೇವತೆಗಳು ಮತ್ತು ಭಿಕ್ಷುಗಳ ಪ್ರತಿಮೆಗಳಿವೆ. ಸಂಪುಟಗಳನ್ನು ಕಾದಿರಿಸಲಾಗಿತ್ತು. ಒಳಗಿನ ಕಂಬಗಳ ಮೇಲೆ ಸ್ವರ್ಣಲೇಪಿತ ಬೋಧಿಸತ್ತ್ವ ವಿಗ್ರಹಗಳನ್ನು ನಿಲ್ಲಿಸಲಾಗಿತ್ತು. ಆಸ್ಥಾನಶಿಲ್ಪಿ ಲಿ-ಚೈ 1100ರಲ್ಲಿ ರಚಿಸಿದ ಯಿಂಗ್- ತ್ಸಾವೋ ಪಾಷೀ ಎಂಬ ವಾಸ್ತು ಶಾಸ್ತ್ರಗ್ರಂಥದಲ್ಲಿ ಗಿಲೀಟುಮಾಡುವ ಕಲೆಯ ತಾಂತ್ರಿಕ ನಿರೂಪಣೆ ನೀಡಿದ್ದಾನೆ. ವಾಸ್ತುಕಲೆಯ ವಿವಿಧಮುಖಗಳ ಸಮಗ್ರ ನಿರೂಪಣೆಯಿಂದ ಆ ಗ್ರಂಥ ಈಗಲೂ ಉಳಿದು ಬಂದಿದೆ. ವಾಸ್ತುಕಲೆಯ ಅಧ್ಯಯನಕ್ಕೆ ಅದೊಂದು ಅಮೂಲ್ಯ ಕೊಡುಗೆ, ಸುಂಗ್ ವಂಶದ ಕೊನೆಯ ಕಾಲದ ನಿರ್ಮಾಣಗಳ ಅನುಕರಣೆಯಿಂದ 13-14ನೆಯ ಶತಮಾನಗಳಲ್ಲಿ ಜಪಾನಿನಲ್ಲಿ ನಿರ್ಮಿಸಿದ eóÉನ್ ಬೌದ್ಧ ಮಂದಿರಗಳು ಸುಂಗ್ ವಾಸ್ತುನಿರ್ಮಾಣಗಳ ಬಗ್ಗೆ ಉತ್ತಮ ಮಾಹಿತಿ ನೀಡುತ್ತವೆ.

	ಸುಂಗ್ ಮತ್ತು ಅದಕ್ಕೂ ಮೊದಲ ಐದು ರಾಜವಂಶಗಳ ಕಾಲದಲ್ಲಿ ನಿರ್ಮಿತವಾದ 10-12ನೆಯ ಶತಮಾನಗಳ ಸುಮಾರು 60 ಪಗೋಡಗಳು ಉಳಿದುಬಂದಿವೆ. ಇವುಗಳಲ್ಲಿ ಅರ್ಧಕ್ಕೂ ಹೆಚ್ಚಿನವು ಯಾಂಗ್‍ಟ್ಸೀ ನದಿಯ ಕೆಳಬಯಲಿನಲ್ಲಿವೆ. ಇವು ಬಹುಮಟ್ಟಿಗೆ ಹಿಂದಿನ ಶೈಲಿಯವು. ಆದರೆ ಅವುಗಳ ಸೂರುಗಳು ಹೆಚ್ಚು ಅಲಂಕೃತ. ಹೊರಗೋಡೆಗಳ ಮೇಲ್ಮೈಯನ್ನು ಹಸಿರು ಹೆಂಚುಗಳಿಂದ ಮುಚ್ಚಲಾಗಿದೆ. ಚಾವಣಿಗಳ ಮಾಡಗಳಿಗೂ ಹಸಿರು ಹೆಂಚುಗಳನ್ನು ಜೋಡಿಸಿ ಅವುಗಳ ವಕ್ರತೆಯನ್ನು ಹೆಚ್ಚಿಸಲಾಗಿದೆ. ಆ ಕಾಲದ ಪಗೋಡಗಳು ಮರದ ಕಟ್ಟಡಗಳ ಅನುಕರಣೆಗಳು. ಅವುಗಳ ಹೆಂಚಿನ ಚಾವಣಿಗಳಿಗೆ ಆಧಾರವಾಗಿ ಮರದ ಅಡ್ಡತೊಲೆಗಳನ್ನು ಬಳಸಲಾಗಿದೆ. ಆ ಕಾಲದ ಉತ್ತರ ಚೀನದ ಪಗೋಡಗಳಿಗಿಂತ ದಕ್ಷಿಣ ಭಾಗದ ಪಗೋಡಗಳು ಹೆಚ್ಚು ಎತ್ತರವಾಗಿವೆ.

	ಸುಂಗ್ ಪ್ರಾರಂಭ ಕಾಲದ ಪಗೋಡಗಳ ಶೈಲಿ ಸರಳವೂ ಶಕ್ತಿಯುತವೂ ಆಗಿತ್ತು. ಅವುಗಳ ಸೂರುಗಳೂ ಮೂಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮೇಲ್ಮುಖವಾಗಿ ಬಾಗಿರುತ್ತಿದ್ದವು. ಪಗೋಡಗಳ ನಿರ್ಮಾಣದಲ್ಲಿ ಕಬ್ಬಿಣದ ಬಳಕೆ ಹೆಚ್ಚು ಉಪಯೋಗಕ್ಕೆ ಬಂದ 12ನೆಯ ಶತಮಾನದ ಕಟ್ಟಡಗಳಲ್ಲಿ ಪ್ರಮುಖವಾದ ಚಿನಿಂಗ್ ಪಗೋಡ (1105) ಹೊಸ ಬೆಳೆವಣಿಗೆಯತ್ತ ಮೊದಲ ಹೆಜ್ಜೆ. ದಕ್ಷಿಣಭಾಗದಲ್ಲಿ ಅವುಗಳಿಗೆ ಕಲ್ಲಿನ ಹೊದಿಕೆಯನ್ನು ಜೋಡಿಸಲಾಯಿತು. ಸೂ-ಔನಲ್ಲಿರುವ ಔತ್ತರೇಯ ಪಗೋಡ ಅಷ್ಟಪ್ರಕಾರಗಳ ಬುಡ ಮತ್ತು ದುಂಡಾದ ಮೇಲ್ಭಾಗಗಳಿರುವ ಪ್ರಾಚೀನ ಸಾಂಪ್ರದಾಯಿಕ ಶೈಲಿಯಲ್ಲಿದೆ.

	ಸುಂಗ್ ಕಾಲದ ಮರದ ಹೊರಮೈಯುಳ್ಳ ಕಟ್ಟಡಗಳಲ್ಲಿ ಪ್ರಮುಖವಾದವನ್ನು ಹೋಪೇ ಪ್ರಾಂತ್ಯದ ಚೆಂಗ್-ಟಿಂಗ್-ಹ್ಸಿಯೆನ್‍ನಲ್ಲಿ ಕಾಣಬಹದು. ಅಲ್ಲಿರುವ ನಾಲ್ಕು ಕಟ್ಟಡಗಳಲ್ಲಿ ಮೂರು ಸುಸ್ಥಿತಿಯಲ್ಲಿವೆ. ಮತ್ತೊಂದು ಕಟ್ಟಡ ಜೀರ್ಣವಾಗಿದೆ. ವಿಶಾಲವಾಗಿದೆ. ಕಿರಿ ಅಗಲದ ಉದ್ದವಾದ ಆ ಕಟ್ಟಡಗಳ ಹಿಂಭಾಗದಲ್ಲಿ ವಿಶಾಲವಾದ ಪ್ರಾಂಗಣಗಳುಂಟು. ಆ ಪ್ರಾಂಗಣಗಳಲ್ಲೊಂದರಲ್ಲಿ 971ರಲ್ಲಿ ನಿರ್ಮಿತವಾದ 73' ಎತ್ತರದ, 72 ಕೈಗುಳುಳ್ಳ ಕುಅನ್-ಯಿನ್ ಬೋಧಿಸತ್ವ ವಿಗ್ರಹವನ್ನು ನಿಲ್ಲಿಸಲಾಗಿದೆ. ಆ ಪ್ರಾಂಗಣದ ಗೋಡೆಗಳ ಮೇಲೆ ಗಾರೆಯ ಗಚ್ಚಿನಲ್ಲಿ ಮಾಡಿದ ಉಬ್ಬುಚಿತ್ರಗಳು ಬೋಧಿಸತ್ತ್ವರ ಮತ್ತು ಅವರ ಹಿಂಬಾಲಕರ ಮೆರವಣಿಗೆಗಳನ್ನು ನಿರೂಪಿಸುತ್ತವೆ. ಉತ್ತರ ದಿಕ್ಕಿನ ಗೋಡೆಯ ಮೇಲೆ 1089ರ ಒಂದು ಶಾಸನವುಂಟು. ಹಿಂಭಾಗದ ಈ ಪ್ರಾಂಗಣದ ಎರಡು ಪಾಶ್ರ್ವಗಳಲ್ಲೂ ಒಂದೇ ಮಾದರಿಯ ಅಂಗಳಗಳಿವೆ. ಪಶ್ಚಿಮ ಮತ್ತು ಪೂರ್ವದಲ್ಲಿರುವ ಇವನ್ನು ಅನುಕ್ರಮವಾಗಿ ಸೂತ್ರಗ್ರಂಥಾಗಾರ ಮತ್ತು ಮೈತ್ರೇಯ ಅಂಗಳಗಳೆಂದು ಕರೆಯಲಾಗಿದೆ. ಇವು ಬಹುಶಃ ಅನಂತರದ ಚಿನ್ ಕಾಲಕ್ಕೆ ಸೇರುತ್ತವೆ. ಇವಕ್ಕೆ ಸೇರಿದಂತಿರುವ ಇತರ ಕೆಲವು ಕಟ್ಟಡಗಳು ಟಾಂಗ್ ಶೈಲಿಯಿಂದ ಭಿನ್ನವಾದವು.

	ಇಲ್ಲಿರುವ 10ನೆ ಶತಮಾನದ ಮೊ-ನಿ-ಟಿಯೆನ್ ಹೊಸ ಜಾಡಿಗೆ ಸೇರಿದ ಹಜಾರ. ಇದರ ನಾಲ್ಕು ಪಾಶ್ರ್ವಗಳಲ್ಲೂ ಒಂದೊಂದು ಪ್ರವೇಶ ಮಂಟಪವುಂಟು. ವಿಶಾಲವಾದ ಈ ಹಜಾರದ ಮತ್ತು ಪ್ರವೇಶ ಮಂಟಪಗಳ ಚಾವಣಿಗಳು ಮೂಲೆಗಳಲ್ಲಿ ಮೇಲ್ಮುಖವಾಗಿ ಬಾಗಿವೆ.

	ಸುಂಗ್ ವಾಸ್ತುಶಿಲ್ಪಿಗಳು ರಚನಾಚಾತುರ್ಯದೊಂದಿಗೆ ಪ್ರೇಕ್ಷಣೀಯತೆಯನ್ನೂ ಸಮ್ಮಿಲನಗೊಳಿಸಿಕೊಂಡಿದ್ದುದರಿಂದ ಅವರ ನಿರ್ಮಾಣಗಳಲ್ಲಿ ಒಂದು ನವೀನತೆಯನ್ನು ಕಾಣಬಹುದು. ಇದರೊಂದಿಗೆ ಅವರು ಅನೇಕ ಸಣ್ಣಪುಟ್ಟ ಸುಧಾರಣೆಗಳನ್ನು ಅಳವಡಿಸಿಕೊಂಡು ಕಟ್ಟಡಗಳ ಸರಳತೆ ಮತ್ತು ಸೌಂದರ್ಯಗಳನ್ನು ಹೆಚ್ಚಿಸಿದ್ದಾರೆ. ಈ ಸುಧಾರಣೆಗಳಿಗೆ ಬಹುಮಟ್ಟಿಗೆ ದಕ್ಷಿಣದ ಶಿಲ್ಪಿಗಳು ಕಾರಣ. ತತ್ಪೂರ್ವದ ವಾಸ್ತುಸಂಪ್ರದಾಯ, ಭಾರತ ಮತ್ತು ಇತರ ಪ್ರದೇಶಗಳ ಕಟ್ಟಡಗಳ ಪ್ರಭಾವ ಮತ್ತು ಸೃಜನಾತ್ಮಕ ಚಾತುರ್ಯಗಳ ಸಮ್ಮಿಲನದಿಂದ ಒಂದು ಹೊಸ ಶೈಲಿಯನ್ನು ರೂಢಿಸಿಕೊಂಡಿದ್ದರು. ಆ ಕಾಲದ ಕಂಬಗಳಲ್ಲಿ ಅಗಿರುವ ಸುಧಾರಣೆಗಳು ಗಮನಾರ್ಹ. ಮೊದಲಿನ ಸರಳ ದುಂಡು ಕಂಬಗಳ ಬದಲು ಕೆಳಭಾಗದಲ್ಲಿ ನಾಲ್ಕು ಆರು ಅಥವಾ ಎಂಟು ಮುಖಗಳುಳ್ಳ, ಮೇಲ್ಭಾಗದಲ್ಲಿ ದುಂಡಿಗಿರುವ ಕಂಬಗಳು ಕ್ರಮೇಣ ಬಂದುವು. ಕಂಬದ ತುದಿಯಲ್ಲಿ ಬೋದಿಗೆಗಳು ರೂಢಿಗೆ ಬಂದುವು. ತರುವಾಗ ಬೋದಿಗೆಗಳ ಬದು ಅವಿಭಾಜ್ಯವಾದ ಖಿ ಆಕಾರದ ಕಂಬಗಳು ಬಳಕೆಗೆ ಬಂದುವು. ಸುಂಗ್ ಕಾಲದಲ್ಲಿ ಗುಮ್ಮಟಾಕಾರದ ಚಾವಣಿಗೆ ಆಧಾರವಾದ ಈ ಖಿ ಆಕಾರದ ಕಂಬಗಳ ತುದಿಯಲ್ಲಿ ಒಂದರ ಮೇಲೊಂದರಂತೆ ಜೋಡಿಸಲಾದ ಚಾಚುಪೀಠಗಳ ಮೇಲೆ ಕಂಸಗಳನ್ನು ನಿಲ್ಲಿಸುವ ಪದ್ಧತಿ ಬಂತು. ಕಾಲಕ್ರಮದಲ್ಲಿ ಅದೇ ಒಂದು ವಿಶಿಷ್ಟ ವಾಸ್ತು ಲಕ್ಷಣವಾಯಿತೆನ್ನಬಹುದು. ಇಂಥ ಕಂಬಗಳ ನಿದರ್ಶನಗಳನ್ನು 10ನೆಯ ಶತಮಾನದ ಕೊನೆಯ ಭಾಗಕ್ಕೆ ಸೇರಿದ, ಹೋಪೇ ಪ್ರಾಂತ್ಯದ ಟು-ಲೊ-ಸ್ಸುನಲ್ಲಿರುವ ಕುಅನ್-ಉಯಿನ್-ಕೊ ಮಂದಿರದಲ್ಲಿ ನೋಡಬಹುದು. ಈ ಕಂಬಗಳ ಅನುಕರಣೆಯನ್ನು ಜಪಾನಿನ ತೋಷೋಡೈಜಿ ಮತ್ತು ಹೊರ್ಯೂಜಿ ಮಂದಿರಗಳಲ್ಲೂ ಕಾಣಬಹುದು.

	ದಕ್ಷಿಣ ಸುಂಗ್ ಶೈಲಿಯ, 12ನೆಯ ಶತಮಾನದ, ಕಟ್ಟಡಗಳಲ್ಲಿ ಉತ್ತಮವಾದುದೆಂದರೆ ಸೂ-ಚೌ ಪ್ರಾಂತ್ಯದ ಟೌ ಧರ್ಮಕ್ಕೆ ಸೇರಿದ ಯುಆನ್-ಮಿಯವೋ-ಕುಅನ್. ನಿರ್ಮಾಣವಾದ ಸ್ವಲ್ಪಕಾಲಕ್ಕೆ ಇದು ಅಗ್ನಿಗೆ ಅಹುತಿಯಾದ್ದರಿಂದ 1179ರಲ್ಲಿ ಇದನ್ನು ಪುನರ್ನಿರ್ಮಿಸಲಾಯಿತು. ಇದರ ವಿಸ್ತೀರ್ಣ 158' x 84', ಇದರ ಮಾದರಿಯಲ್ಲಿ ನಿರ್ಮಿತವಾದ ಜಪಾನಿನ ಕರಾಯೊ ಈಗಲೂ ಉಳಿದು ಬಂದಿದೆ. ಇಟ್ಟಿಗೆಯ ದಪ್ಪ ಗೋಡೆಗಳ ಬದಲು ತೆಳುವಾದ ಮರದ ತಡಿಕೆಗಳಿಂದ ಅದನ್ನು ವಿಭಾಗಿಸಲಾಗಿದೆ. ಅದರಲ್ಲಿ ಬಹಳ ಕ್ಲಿಷ್ಟವಾದ, ಮರದ ಅನೇಕ ಕಂಸ ತೊಲೆಗಳನ್ನು ಉಪಯೋಗಿಸಲಾಗಿದೆ. ಸುಂಗ್ ವಂಶದ ಕಾಲದಲ್ಲಿ ಉತ್ತರಭಾಗದಲ್ಲಿ ಆಳುತ್ತಿದ್ದ ಲಿಯಾವೋ ಮತ್ತು ಅನಂತರ ಕಾಲದ ಆನ್ ವಂಶಗಳ ಕಾಲದಲ್ಲಿ (907-1367) ಅನಾಗರಿಕ ಟಾರ್ಟರ್ ಅಥವಾ ಮಂಗೋಲ್ ಬುಡಕಟ್ಟಿನ ಜನರು ಕಲೆ ಮತ್ತಿತರ ಸಾಂಸ್ಕøತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿರಲಿಲ್ಲ. ಅವರ ಕಾಲದಲ್ಲಿ ಕಟ್ಟಡಗಳು ವೈಶಾಲ್ಯ ಮತ್ತು ಭವ್ಯತೆಗೆ ಪ್ರಾಧಾನ್ಯ ದೊರಕಿತೇ ವಿನಾ ತಾಂತ್ರಿಕ ನೈಪುಣ್ಯ ಮತ್ತು ರಚನಾಚಾತುರ್ಯಗಳಿಗೆ ಗಮನ ಸಲ್ಲಲಿಲ್ಲ. ಆದರೂ ಚಾರಿತ್ರಿಕ ವಿಕಾಸದ ದೃಷ್ಟಿಯಿಂದ ಅವುಗಳ ಅಧ್ಯಯನ ಅವಶ್ಯ. ಯುಅನ್ ವಾಸ್ತುನಿರ್ಮಾಣಗಳನ್ನು ಸುಂಗ್ ಶೈಲಿಯ ಉಪಸಂಹಾರವೆಂದು ಪರಿಗಣಿಸಬಹುದು. ಬಲಾತ್ಕಾರದಿಂದ ಹಿಡಿದು ತಂದ ವಾಸ್ತುಶಿಲ್ಪಿಗಳು ಮತ್ತು ಕಲಾಕಾರರಿಂದ, ತತ್ಪೂರ್ವದ ವಾಸ್ತುಶೈಲಿಯಲ್ಲಿ ಮತ್ತು ಮುಖ್ಯ ಕಟ್ಟಡಗಳ ಮಾದರಿಯಲ್ಲಿ ಕಟ್ಟಿಸಿದ ಮಂದಿರಗಳು ಸಹಜವಾಗಿಯೇ ಸತ್ತ್ವಪೂರ್ಣವೂ ಸ್ವೋಪಜ್ಞವೂ ಆಗಿರಲಿಲ್ಲ. 13ನೆಯ ಶತಮಾನದ ಮಂಗೋಲ್ ಆಕ್ರಮಣಗಳು ಆ ಮೊದಲಿನ ಸಾಂಸ್ಕøತಿಕ ಪರಂಪರೆಯನ್ನು ಪೂರ್ಣವಾಗಿ ನಾಶಗೊಳಿಸಿದುವು. ಆ ಕಾಲದ ಮುಖ್ಯ ನಗರಗಳಾದ ಪೀಕಿಂಗ್, ಷಾನ್‍ಸೀ ಪ್ರಾಂತ್ಯದ ಟಾ-ಟುಂಗ್-ಫು ಮತ್ತು ಹೋನ್ಯಾನ್ ಪ್ರಾಂತ್ಯದ ಕೈ-ಫೆಂಗ್-ಫುಗಳಲ್ಲಿ ಗೋಡೆಗಳು, ವೇದಿಕೆಗಳು, ಪಗೋಡಗಳು ಮತ್ತಿತರ ವಾಸ್ತು ನಿರ್ಮಾಣಗಳ ಅವಶೇಷಗಳನ್ನು ಕಾಣಬಹುದು. ಡಾಡುಂಗ್ ನಗರದಲ್ಲಿ ಲಿಯವೊ ಮತ್ತು ಚಿನ್ ವಂಶಗಳ ಕಾಲಕ್ಕೆ ಸೇರಿದ ಏಳು ಕಟ್ಟಡಗಳನ್ನೊಳಗೊಂಡ ಎರಡು ವಿಹಾರಗಳ ಅವಶೇಷಗಳೂ ಇವೆ. ಪರಂಪರಾಗತ ಚೀನೀ ಶೈಲಿಯಲ್ಲೇ ಆದರೂ ಹೆಚ್ಚು ವಿಸ್ತಾರವೂ ಭವ್ಯವೂ ಆದ ಕಟ್ಟಡಗಳನ್ನು ನಿರ್ಮಿಸಲು ಮಂಗೋಲರು ಕಾರಣರಾದರು.

	ಹ್ಸಿಂಗ್-ಷೆಂಗ್ ಅರಮನೆಯ ರಾಣಿವಾಸದಲ್ಲಿ ಮೂರು ವಿಶಾಲ ಭಾಗಗಳಿದ್ದುವು. 200' x 94' ವಿಸ್ತಾರವಿದ್ದ ಮುಂದಿನ ಭಾಗ ಏಳು ಅಂಕಣಗಳಷ್ಟು ವಿಸ್ತೀರ್ಣವಾಗಿತ್ತು. ಅದರ ಮೊಗಸಾಲೆಯ ಮೂಲಕ ಅರಸನ ಶಯ್ಯಾಗೃಹವನ್ನು ತಲುಪಬಹುದಿತ್ತು.. ಐದು ಅಂಕಣಗಳ ಶಯ್ಯಾಗೃಹದ ಎರಡು ಬದಿಗಳಲ್ಲೂ 3 ಅಂಕಣಗಳ ಅಗಲದ 77' ಉದ್ದದ ಸುವಾಸನಾಮಂದಿರವಿತ್ತು. ಅಂಥ ಕಟ್ಟಡಗಳ ಸೌಂದರ್ಯವನ್ನು ಹೆಚ್ಚಿಸಲು ಗೇಬಲ್ ರೀತಿಯ ಹಂತಹಂತವಾದ ಚಾವಣಿಗಳನ್ನು ನಿರ್ಮಿಸಲಾರಂಭಿಸಿದರು. 79' ಗಳ ಚೌಕದ ಯುಅನ್ ಕಾಲದ ಕ್ರೀಡಾಗಾರದ ಚಾವಣಿಯನ್ನು ಶಿಲುಬೆಯಾಕಾರದಲ್ಲಿ ನೀಲಿ ಗಾಜಿನ ಹೆಂಚುಗಳಿಂದ ಮಾಡಲಾಗಿತ್ತು.

	ಲಿಯಾವೋ ಕಾಲದ ಇಟ್ಟಿಗೆಯ ಪಗೋಡಗಳು ವೈಶಿಷ್ಟ್ಯ ಪೂರ್ಣವೂ ಗಾಂಭೀರ್ಯಸೌಂದರ್ಯಪೂರಿತವೂ ಆಗಿವೆ. ಅಷ್ಟಸ್ರಾಕೃತಿಯ ಈ ಮಂದಿರಗಳಲ್ಲಿ ಕೆಳ, ಮಧ್ಯೆ ಮತ್ತು ಅಗ್ರಭಾಗಗಳು ಪ್ರತ್ಯೇಕ ಅಂಗಗಳಾಗಿರುತ್ತಿದ್ದುವು. ಮಧ್ಯಭಾಗದ ಹೊರಗೋಡೆಗಳ ಮೇಲೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ದೃಶ್ಯಗಳ ಉಬ್ಬುಚಿತ್ರಗಳನ್ನು ಕೆತ್ತಿರುತ್ತಿತ್ತು. ಅಗ್ರಭಾಗದಲ್ಲಿ ಸಾಮಾನ್ಯವಾಗಿ ಹಂತಹಂತವಾದ 13 ಅಂತಸ್ತುಗಳು ಇದ್ದುವು. ಕೆಳ ಅಂತಸ್ತುಗಳ ಚಾವಣಿ ಸೂರುಗಳು ಚೀನೀ ಸಂಪ್ರದಾಯದ ಕಂಸಗಳಾಕಾರದಲ್ಲಿದ್ದರೆ ಮೇಲಂತಸ್ತುಗಳ ಸೂರುಗಳು ಹೊರಚಾಚಿರುತ್ತಿದ್ದುವು. ತುದಿಯಲ್ಲಿ ಶಿಖರವಿರುತ್ತಿತ್ತು. ಈ ಪಗೋಡಗಳ ಶೈಲಿಯ ಉಗಮ ಮತ್ತು ವಿಕಾಸಗಳನ್ನು ಗುರುತಿಸುವುದು ಕಷ್ಟಸಾಧ್ಯ. ಟಾಂಗ್ ಕಾಲದಲ್ಲಿ ಇದನ್ನು ಹೋಲುವ ಪಗೋಡ ಶೈಲಿ ರೂಢಿಯಲ್ಲಿದ್ದರೂ, ಲಿಯಾವೋ ಪಗೋಡಗಳಿಗೆ ಅದು ನೇರ ಮೂಲವಾಗಿರಲಾರದು. ಬಹುಶಃ ಈ ಎರಡು ಶೈಲಿಗಳೂ ಭಾರತದ ತಾಂತ್ರಿಕ ಬೌದ್ಧಪಂಥಗಳಿಂದ ಹುಟ್ಟಿಕೊಂಡಿರಬೇಕು. ಲಿಯಾವೋ ಪಗೋಡ ಶೈಲಿ ಚಿನ್‍ವಂಶ ಕಾಲದಲ್ಲೂ ಮುಂದುವರಿಯಿತು.

	ಆ ಕಾಲದ ಪಗೋಡಗಳಲ್ಲಿ ಜೆಹೊಲ್ ಪ್ರಾಂತ್ಯದ ಟಾ-ಮಿಂಗ್-ಚಿಂಗ್‍ನ ದೊಡ್ಡ ಪಗೋಡ ಮುಖ್ಯವಾದ್ದು. ಇದರ ಎತ್ತರ 270'. ಆಗಿನ ಸಣ್ಣ ಪಗೋಡಗಳು ಕೇವಲ 60' ಇರುತ್ತಿದುವು. ಅವುಗಳ ನಿರ್ದಿಷ್ಟ ಆಕಾರ ಮತ್ತು ಔನ್ನತ್ಯಗಳಿಗೆ ಅನುಗುಣವಾಗಿ ಅನೇಕ ಮಾರ್ಪಾಟುಗಳನ್ನು ಮಾಡಲು ಸಾಧ್ಯವಿತ್ತು. ಸಣ್ಣ ಪಗೋಡಗಳು ಆರು ಮುಖಗಳಿಂದ ಕೂಡಿರುತ್ತಿದ್ದುವು. ಅವುಗಳಲ್ಲಿ 9 ಅಥವಾ 7 ಅಂತಸ್ತುಗಳಿರುತ್ತಿದ್ದುವು. ಜೆಹೊಲ್ ಪ್ರದೇಶದ ಕೆಲವು ಮಂದಿರಗಳು ಚತುರಸ್ರಾಕೃತಿಯಲ್ಲೂ ಇವೆ. ಟಾಂಗ್ ಪಗೋಡಗಳ ಪ್ರಭಾವಗಳನ್ನು ಇವುಗಳಲ್ಲಿ ಕಾಣಬಹುದು. ಪಗೋಡಗಳ ಹೊರಗೋಡೆಗಳ ಮೇಲೆ ವಿಶಿಷ್ಟ ಆಸನದ ಮೇಲೆ ತಾಂತ್ರಿಕ ಪಂಥದ ದೊಡ್ಡ ಬುದ್ಧಮೂರ್ತಿಯನ್ನೂ ಅದರ ಎರಡು ಪಾಶ್ರ್ವಗಳಲ್ಲೂ ಪರಿವಾರವರ್ಗವನ್ನೂ ಆಚೆಗೆ ಪಗೋಡಗಳ ಉಬ್ಬು ಚಿತ್ರಗಳ ಮಾದರಿಗಳನ್ನೂ ಕೆತ್ತಿರುತ್ತಿತ್ತು. ತಾಂತ್ರಿಕ ಪಂಥಕ್ಕನುಗುಣವಾಗಿ ನಾಲ್ಕು ದಿಕ್ಕುಗಳಲ್ಲಿ ಬುದ್ಧ ಮೂರ್ತಿಗಳನ್ನೂ ಮಹಾಯಾನ ಪಂಥಾನುಸಾರವಾಗಿ ಎಂಟು ಮಹಾ ಸ್ತೂಪಗಳನ್ನೂ ಪಗೋಡಗಳ ಮೇಲೆ ನಿರೂಪಿಸಲಾಗುತ್ತಿತ್ತೆಂದು ಆ ಚಿತ್ರಗಳ ವಿವರಗಳಿಂದ ತಿಳಿಯಬಹುದು. ನಾಲ್ಕು ದಿಕ್ಕುಗಳ ಬುದ್ಧಮೂರ್ತಿಗಳು ತಾಂತ್ರಿಕ ನಂಬಿಕೆಗನುಸಾರವಾಗಿ ಕೇಂದ್ರಸ್ಥ ವೈರೋಚನ ಬುದ್ಧನ ಬಾಹ್ಯರೂಪಗಳಾಗಿದ್ದು. ಮಧ್ಯದಲ್ಲಿ ಪಗೋಡದಲ್ಲಿರುವ-ವೈರೋಚನನನ್ನು ಪ್ರತಿನಿಧಿಸುತ್ತವೆ. ಯುಅನ್-ಟುಂಗ್ ಸ್ಸು ದಲ್ಲಿರುವ 12ನೆಯ ಶತಮಾಣದ ಅಷ್ಟಸ್ರಾಕೃತಿಯ ಪಗೋಡದ ಎಂಟು ಮುಖಗಳ ಮೇಲೆ ಅನುಕ್ರಮವಾಗಿ ಬುದ್ಧ ಮತ್ತು ಬೋಧಿಸ್ತತ್ವರನ್ನು ರೂಪಿಸಲಾಗಿದ್ದರೆ, ಟಾ-ಮಿಂಗ್-ಚೆಂಗ್‍ನ ಮಹಾಪಗೋಡದಲ್ಲಿ ಎಂಟು ಮಹಾ ಬೋಧಿಸ್ತತ್ವರನ್ನು ಕೆತ್ತಲಾಗಿದೆ. ಕೆಳಗಿನ ವೇದಿಕೆಯ ಮೇಲೆ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ. ಪ್ರತಿಯೊಂದು ಪಾಶ್ರ್ವದಿಂದಲೂ ಸಿಂಹಮುಖಗಳು ಮುನ್‍ಚಾಚಿಕೊಂಡಿವೆ. ತಾಂತ್ರಿಕ ಪಂಥದ ಪ್ರಕಾರ ವೈರೋಚನ ಬುದ್ಧನ ವಾಹನ ಸಿಂಹ.

	ಹೋಪೇ ಪ್ರಾಂತ್ಯದ ಪಗೋಡಗಳಲ್ಲಿ ಶಿಲ್ಪಕಲೆ ವಿರಳವಾಗಿದೆ. ವಾಸ್ತು ಅಲಂಕರಣ ವಿಧಾನಗಳಿಗೆ ಅಲ್ಲಿ ಪ್ರಾಧಾನ್ಯ. ಕಂಬಗಳ ಬೋದಿಗೆಗಳ ಮೇಲೆ ಗಮನಾರ್ಹವಾದ ಕಂಸಗಳ ವಿವಿಧ ರೂಪಗಳನ್ನು ಬಳಸಿಕೊಂಡು ಅದರಿಂದ ಒಂದು ವಿಚಿತ್ರ ಸೌಂದರ್ಯವನ್ನು ಸೃಷ್ಟಿಸಲಾಗಿದೆ. ಮೊದಮೊದಲು ಹೆಚ್ಚು ಬಲವಾಗಿದ್ದ ಕಂಸಗಳು ಕ್ರಮೇಣ ನಾಜೂಕಾದುವು. ಅವುಗಳ ಸಂಖ್ಯೆ ಹೆಚ್ಚಿತು. ಆ ಪ್ರದೇಶದ ಎಲ್ಲ ಪಗೋಡಗಳಲ್ಲೂ ಕಂಸಗಳಿಂದ ಕೂಡಿದ ಮೊಗಸಾಲೆಗಳು ಕಂಡುಬರುತ್ತವೆ.

	ಅನೇಕ ಅಂತಸ್ತುಗಳಿದ್ದ ಇಟ್ಟಿಗೆಯ ಪಗೋಡಗಳು ಲಿಯಾವೊ ಪ್ರದೇಶಗಳಲ್ಲಿ ವಿರಳ. ಮಂಚೂರಿಯದಲ್ಲಿರುವ ಬಿಳಿಯ ಪಗೋಡಗಳಲ್ಲಿ ಏಳು ಅಂತಸ್ತುಗಳುಂಟು. ಮರದ ಪಗೋಡಗಳ ಮಾದರಿಯಲ್ಲಿ ನಿರ್ಮಿತವಾದ ಈ ಇಟ್ಟಿಗೆಯ ಪಗೋಡಗಳ ನಾಲ್ಕು ಪಾಶ್ರ್ವಗಳಲ್ಲೂ ಕೆಳ ಅಂತಸ್ತುಗಳಲ್ಲಿ ಕಮಾನಿರುವ ಪ್ರವೇಶದ್ವಾರಗಳನ್ನೂ ಮೇಲು ಅಂತಸ್ತುಗಳಲ್ಲಿ ಬಾಗಿಲನ್ನು ಕಡೆಯಲಾಗಿರುತ್ತಿತ್ತು. ಸುಂಗ್ ಪಗೋಡಗಳ ಪ್ರಭಾವಗಳನ್ನು ಇವುಗಳಲ್ಲಿ ಕಾಣಬಹುದು. ಕಂಸಗಳ ಮಧ್ಯದಲ್ಲಿರುವ ಗೋಡೆಗಳ ಮೇಲೆ ಹೂಬಳ್ಳಿಗಳ ಕೆತ್ತನೆಗಳನ್ನು ಮಾಡಲಾಗಿದೆ.

	ಯುಅನ್ ಕಾಲದ ಪಗೋಡಗಳಲ್ಲಿ ಹೊಸತೇನೂ ಕಂಡುಬರುವುದಿಲ್ಲ. ದಕ್ಷಿಣ ಪ್ರದೇಶಗಳಲ್ಲಿ ಸುಂಗ್ ಕಟ್ಟಡಗಳ ಅಡಿಪಾಯದ ಮೇಲೆ, ಆ ಕಾಲದ ಅಂಶಗಳನ್ನೊಳಗೊಂಡಿರುವ ಪಗೋಡಗಳನ್ನು ನಿರ್ಮಿಸಲಾಗಿದೆ. ಉತ್ತರದಲ್ಲಿ-ಪೀಕಿಂಗ್‍ನಲ್ಲಿರುವ 14ನೆಯ ಶತಮಾನದ ಎರಡು ಪಗೋಡಗಳಲ್ಲಿ-ಲಿಯವೋ ಶೈಲಿಯ ಪ್ರಭಾವ ಹೆಚ್ಚಾಗಿದೆ. ಮಂಗೋಲರ ಆಳ್ವಿಕೆಯಲ್ಲಿ ಲಾಮಾ ಬೌದ್ಧ ಪಂಥಕ್ಕೆ ಹೆಚ್ಚು ಪ್ರಾಧಾನ್ಯ ದೊರಕಿದ್ದರಿಂದ ಸೀಸೆಯಾಕಾರದ ಟಿಬೆಟನ್ ಸ್ತೂಪಗಳು ಚೀನದಲ್ಲಿ ಬಳಕೆಗೆ ಬಂದಿರಬೇಕು. ಕೂಬ್ಲೈಖಾನ್ ಕಟ್ಟಿಸಿದಂಥ ಒಂದು ಸ್ತೂಪ ಪೀಕಿಂಗಿನಲ್ಲಿ ಇನ್ನೂ ಉಳಿದು ಬಂದಿದೆ.

	ಲಿಯಾವೊ ಕಾಲದ ಕಟ್ಟಡಗಳಲ್ಲಿ ಅತ್ಯಂತ ಪ್ರಾಚೀನವಾದ, 984ರಲ್ಲಿ ಕಟ್ಟಿ ಟು-ಲೋ-ಸ್ಸು ಮಂದಿರ ಹೋಪೇ ಪ್ರಾಂತ್ಯದ ಜಿ-ಹ್ಸಿಯೆನ್‍ನಲ್ಲಿದೆ. ಅದರ ಗಮನಾರ್ಹ ಅಂಗಗಳೆಂದರೆ ಷಾನ್‍ಮೆನ್ ಅಥವಾ ಪ್ರವೇಶ ಮಂಟಪ ಮತ್ತು ಕುಅನ್ -ಯಿನ್-ಕೋ ಅಥವಾ ಅವಲೋಕಿತೇಶ್ವರ ಮಂಟಪ. ಪ್ರವೇಶ ಮಂಟಪ 55' x 29' ಇದೆ. ಇದಕ್ಕೆ ಒಂದು ಅಂತಸ್ತು ಇದೆ. ಅವಲೋಕಿತೇಶ್ವರ ಮಂಟಪದ ವಿಸ್ತೀರ್ಣ 67' x 47' ಜಗತಿಯ ಮೇಲೆ 68' ಎತ್ತರದ ಎರಡು ಅಂತಸ್ತುಗಳಿವೆ. ಇದರ ಚಾವಣಿಯ ಮಧ್ಯಭಾಗದಿಂದ ಅವಲೋಕಿತೇಶ್ವರನ ಪ್ರತಿಮೆ ಎದ್ದು ಕಾಣುತ್ತದೆ. ಚಾವಣಿಯ ಸೂರುಗಳಲ್ಲಿ 24 ಪ್ರತ್ಯೇಕ ರೀತಿಯ ಕಂಸಗಳನ್ನು ಬಳಸಲಾಗಿದೆ. ಇದರಿಂದ ಕಟ್ಟಡ ನಿರ್ಮಾಣದ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲು ಸಾಧ್ಯವಾಗಿದೆ.

	ಷಾನ್ ಸೀ ಮತ್ತು ಮಂಗೋಲಿಯಗಳ ಎಲ್ಲೆಯಲ್ಲಿರವುವು ಟಾ-ಟುಂಗ್ಪುರಗಳುಂಟು. ಅವುಗಳಲ್ಲಿ ಹು-ಯೆನ್-ಫುನಲ್ಲಿ ಅದು ಟಾರ್ಟನರ ರಾಜಧಾನಿಯಗಿದ್ದಾಗ ನಿರ್ಮಿತವಾದ ಎರಡು ಮಂದಿರಗಳುಂಟು. ಅವುಗಳಲ್ಲಿ ಹು-ಯೆನ್-ಸ್ಸು ಪ್ರಮುಖವಾದ್ದು. ಅದರಲ್ಲಿ ಖಿಟಾನ್ ದೊರೆಗಳ ಪ್ರತಿಮೆಗಳನ್ನು 1062ರಿಂದ ಕಾದಿರಿಸಲಾಗಿತ್ತು. ಎರಡನೆಯದಾದ ಪು-ಯೆನ್-ಸ್ಸು ಮಂದಿರ ಪೂರ್ವಾಭಿಮುಖವಾಗಿದೆ. ಅಕ್ಕಪಕ್ಕಗಳಲ್ಲಿರುವ ಎರಡು ಗರ್ಭಗುಡಿಗಳಲ್ಲಿ ಉತ್ತರಕ್ಕಿರುವ ಮೇಲಣ ಗುಡಿಯಲ್ಲಿ ಚಿನ್ ಕಾಲದ ವಿಶಾಲ ಹಜಾರವೂ ದಕ್ಷಿಣಕ್ಕಿರುವ ಕೆಳಗಿನ ಗುಡಿಯಲ್ಲಿ 1038ರಲ್ಲಿ ನಿರ್ಮಿಸಿದ ಗ್ರಂಥಾಗಾರವೂ ಗಮನಾರ್ಹ. ಗ್ರಂಥಾಗಾರದ ವಿಸ್ತೀರ್ಣ 85' x 62'. ಒಳಭಾಗದಲ್ಲಿ ಅರ್ಚಕರ ಕಟಕಟೆಯುಳ್ಳ ವೇದಿಕೆ ಮತ್ತು ಪ್ರದಕ್ಷಿಣ ಪಥಗಳುಂಟು. ಇಟ್ಟಿಗೆಯಿಂದ ಕಟ್ಟಲಾದ ವೇದಿಕೆ ಶಿಲ್ಪಗಳಿಂದ ಅಲಂಕೃತ. ಈ ಕಟ್ಟಡದ ಮುಖ್ಯ ಅಂಗವಾದ ಪುಸ್ತಕ ಕಪಾಟುಗಳನ್ನು ಎರಡು ಅಂತಸ್ತುಗಳಲ್ಲಿ, ಸುತ್ತಲೂ ಗೋಡೆಗೆ ಹೊಂದಿದಂತೆ ನಿರ್ಮಿಸಲಾಗಿದೆ. ಇಲ್ಲಿರುವ ಮೂರು ಪೂಜಾಮೂರ್ತಿಗಳ ಮೇಲೂ ಚಾವಣಿಯಲ್ಲಿ ಅರ್ಧಗೋಲಾಕೃತಿಯ ಗುಮ್ಮಟ ಅಥವಾ ಭುವನೇಶ್ವರಿಗಳಿವೆ. ಎರಡನೆಯದಾದ ಷಾನ್-ಹುಅ-ಸ್ಸು ದಕ್ಷಿಣಾಭಿಮುಖವಾದ ಮೂರು ಕಟ್ಟಡಗಳನ್ನೊಳಗೊಂಡಿದೆ. ಪ್ರವೇಶ ಮಂಟಪ ಮತ್ತು ಮೂವರು ಪವಿತ್ರಾತ್ಮರ ಹಜಾರ-ಇವನ್ನು 1120ರ ಸುಮಾರಿನಲ್ಲಿ ಚಿನ್ ದೊರೆಗಳ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಇದರ ಮಧ್ಯ ಹಜಾರದಲ್ಲಿರುವ ಬುದ್ಧನ ಮೂರ್ತಿಯ ತಲೆಯ ಮೇಲಿನ ಚಾವಣಿಯಲ್ಲಿ ಎಂಟು ಮೂಲೆಗಳುಳ್ಳ ಸುಂದರ ಭುವನೇಶ್ವರಿಯಿದೆ.

	ಚಿನ್ ಕಾಲದ ನಿರ್ಮಾಣದಲ್ಲಿ ಹು-ಯೆನ್-ಸ್ಸುದಲ್ಲಿರುವ ಒಂಬತ್ತು ಅಂಕಣ ಉದ್ದ ಐದು ಅಂಕಣ ಅಗಲ ಇರುವ ವಿಶಾಲ ಹಜಾರ ಗಮನಾರ್ಹ. ಲಿಯಾವೊ ಶೈಲಿಯ ಪರಂಪರೆ ಮತ್ತು ಸುಂಗ್ ನವೀನತೆಗಳ ಮಿಶ್ರಣವಾದ ಈ ಹಜಾರದ ಒಳನೋಟ ಈಗಲೂ ಪ್ರೇಕ್ಷಣಿಯ. ಇದರಲ್ಲಿ ತಾಂತ್ರಿಕ ಬೌದ್ಧಪಂಥದ ರಹಸ್ಯಪೂರ್ಣ ಅಸ್ಪಷ್ಟತೆ ತುಂಬಿದೆ. ಅಲ್ಲಿಯ ಉಳಿದ ಎರಡು ಕಟ್ಟಡಗಳು ಸುಂಗ್ ಪ್ರಭಾವದವು. ಚಿನ್ ಕಾಲದ ಇತರ ನಿರ್ಮಾಣಗಳಲ್ಲೂ ಇಂತ ಪ್ರಭಾವಗಳನ್ನು ಗುರುತಿಸಬಹುದು.

	ಯುಅನ್ ಕಾಲದ ನಿರ್ಮಾಣದಲ್ಲಿ ಯಾವುದರಲ್ಲೂ ಗಮನಾರ್ಹ ಸುಧಾರಣೆಗಳಾಗಲಿಲ್ಲ. ಮಿಂಗ್ ಮತ್ತು ಚಿಂಗ್ ರಾಜವಂಶಗಳ ಕಾಲದ ವಾಸ್ತು ನಿರ್ಮಾಣಗಳಲ್ಲಿ ಹೊಸತೇನೂ ಇಲ್ಲದಿದ್ದುದು ಮಾತ್ರವಲ್ಲ, ವಾಸ್ತುಕಲೆ ಆಗ ಅವನತಿ ಹೊಂದತೊಡಗಿತು. ಆ ಕಾಲದ ಪ್ರಾರಂಭದ ಹಂತದಲ್ಲಿ ವಿಶಿಷ್ಟ ವಾಸ್ತುಶೈಲಿಯನ್ನು ನಿರ್ಮಿಸುವ ಪ್ರಯತ್ನಗಳೇನೋ ನಡೆದುವು. ಅದರ ಫಲಿತಾಂಶವಾಗಿ ಸುಂಗ್ ಶೈಲಿಗೆ ಒಂದು ನಿರ್ದಿಷ್ಟ ರೂಪ ದೊರಕಿತಷ್ಟೆ. ಅದಕ್ಕೆ ಹಿಂದಿನ ಕಾಲದ ಚೀನೀ ಕಟ್ಟಡಗಳನ್ನು ಅನುಕರಿಸಿ ಅನೇಕ ಅರಮನೆ ದೇವಾಲಯಗಳು ನಿರ್ಮಿತವಾದುವು. ವಿಶಾಲವಾದ ಅಂಗಳ ಮತ್ತು ಮಹಾದ್ವಾರಗಳುಳ್ಳ ದೊಡ್ಡ ಹಜಾರಗಳು, ಸರೋವರಗಳ ಸುತ್ತ ಹರಡಿದ್ದ ಕ್ರೀಡಾಮಂದಿರಗಳು-ಇವು ಗಮನಾರ್ಹವಾಗಿದ್ದರೂ, ವಾಸ್ತುಕಲೆಯ ಅವನತಿಗೆ ಇವು ಉತ್ತಮ ನಿದರ್ಶನಗಳಾಗಿವೆ. ಲಿಯವೊ ಮತ್ತು ಸುಂಗ್ ಪ್ರಭಾವಗಳು 1600ರ ಸುಮಾರಿನಲ್ಲಿ ನಿರ್ಮಿಸಲಾದ ಕಟ್ಟಡಗಳಲ್ಲೂ ಕಾಣಬರುತ್ತವೆ.

	1444ರ ಸುಮಾರಿಗೆ ಮಿಂಗ್ ದೊರೆಗಳ ಆಶ್ರಯದಲ್ಲಿ ರಾಜಧಾನಿ ಪೀಕಿಂಗಿನಲ್ಲಿ ಕಟ್ಟಲಾದ ಚೀ-ಹುಅ-ಸ್ಸು ಆ ಕಾಲದ ಪ್ರಾತಿನಿಧಿಕ ಕಟ್ಟಡ. ಅನಂತರದ ಕಾಲದಲ್ಲಿ ಚೀನದಲ್ಲಿ ನಿರ್ಮಿತವಾದ ಅನೇಕ ಕಟ್ಟಡಗಳಿಗೆ ಅದು ಮಾದರಿಯಾಯಿತು. ಇಕ್ಕಟ್ಟಾದ ಮತ್ತು ಉದ್ದವಾದ ಆಯಾಕಾರದ ಆ ಕಟ್ಟಡದಲ್ಲಿ ಒಂದರ ಹಿಂದೆ ಒಂದರಂತೆ ಬೇರೆಬೇರೆ ಅಳತೆಗಳ ಅನೇಕ ಅಂಗಳಗಳಿದ್ದುವು. ಮೊದಲ ಅಂಗಳದಲ್ಲಿ ಗಂಟೆ ಮತ್ತು ಕೊಳಗದಾಕರದ ಮಂಟಪಗಳು ಪ್ರಧಾನವಾಗಿದ್ದರೆ ಎರಡನೆಯ ಅಂಗಳದಲ್ಲಿ ಪ್ರವೇಶಮಂಟಪ ಮತ್ತು ನಾಲ್ಕು ಪಾಲಕ ದೊರೆಗಳ ವಿಗ್ರಹಗಳು ಗಮನಾರ್ಹ. ಅನಂತರ ಬುದ್ಧ ಹಜಾರ, ಸುಂದರವಾದ ಶಿಲ್ಪಗಳು ಮತ್ತು ಗ್ರಂಥಾಗಾರಗಳಿರುತ್ತಿದ್ದುವು. ದೇವಾಲಯದ ಮುಖ್ಯ ಭಾಗವಾದ ಜು-ಲೈ. ಟಿಯೆನ್ ಎರಡಂತಸ್ತಿನ ಗರ್ಭಗುಡಿ ಮೂರನೆಯ ಅಥವಾ ನಾಲ್ಕನೆಯ ಅಂಗಳದಲ್ಲಿ ಪ್ರತ್ಯೇಕವಾಗಿರುತ್ತಿತ್ತು. ಅದರ ಹಿಂಭಾಗದಲ್ಲಿ ಸಣ್ಣ ಗುಡಿಗಳನ್ನೂ ಭಿಕ್ಷುಗಳ ವಸತಿಗಳನ್ನೂ ಒಳಗೊಂಡ ಮತ್ತೊಂದು ಅಂಗಳವಿರುತ್ತಿತ್ತು. ಸಾಮಾನ್ಯವಾಗಿ ಇವೆಲ್ಲ ಕಟ್ಟಡಗಳೂ ಸಣ್ಣವಾಗಿರುತ್ತಿದ್ದುವಲ್ಲದೆ ಅವನತಿಯನ್ನು ಸೂಚಿಸುವಂತಿದ್ದುವು. ಜು-ಲೈ-ಟಿಯೆನ್ ಕೇವಲ 60' x 40' ಇರುತ್ತಿತ್ತು. ಮ್ಯಾಂಚೂ ದೊರೆಗಳ ಆಶ್ರಯದಲ್ಲಿ ಬೆಳೆಯುತ್ತಿದ್ದ ಲಾಮಾ ಪಂಥದ ಮಂದಿರಗಳು ಇದಕ್ಕೆ ಅಪವಾದವಾಗಿ ದೊಡ್ಡವಾಗಿದ್ದವು.

	ಜು-ಲೈ-ಟಿಯೆನ್ ಪ್ರಮಾಣಬದ್ಧ ಕಟ್ಟಡವಾಗಿರಲಿಲ್ಲ ಕಂಬಗಳನ್ನು ಯಾವುದೇ ವ್ಯವಸ್ಥಿತ ರೀತಿಯಲ್ಲಿ ಬಳಸಿಲ್ಲದಿದ್ದುರಿಂದ ಮಧ್ಯ ಅಂಕಣ ವಿಸ್ತಾರವಾಗಿಯೂ ನಾಲ್ಕು ಮೂಲೆಗಳ ಭಾಗಗಳು ಇಕ್ಕಟ್ಟಾಗಿಯೂ ಇದ್ದುವು. ಕಮಾನುಗಳು ಮತ್ತು ಕಂಸಗಳು ಬಹಳ ಗಿಡ್ಡಾಗಿದ್ದು ತಮ್ಮ ಮೊದಲಿನ ಭವ್ಯತೆಯನ್ನು ಕಳೆದುಕೊಂಡಿದ್ದುವು. ಅದರ ಮುಂಭಾಗ ಮತ್ತು ಎರಡನೆಯ ಅಂತಸ್ತಿನ ಕಮಾನುಗಳು ಮಾತ್ರ ಪ್ರೇಕ್ಷಣೀಯವಾಗಿದ್ದುವು. ಒಳಭಾಗವೂ ಅಲ್ಲಿಯ ಅರ್ಧವರ್ತುಲಾಕಾರದ ಗುಮ್ಮಟವೂ ಸುಂದರವಾದವು.

	ಮಂಗೋಲರ ಕಾಲದಲ್ಲಿ 15ನೆಯ ಶತಮಾನದಲ್ಲಿ ಹೊ ಏಷ್ಯದ ಪ್ರಭಾವಗಳಿಂದಾಗಿ ಪ್ರವೇಶ ದ್ವಾರಗಳು ಸುರಂಗಗಳನ್ನು ಹೋಲುವ ಓಣಿಗಳಾದುವು. 16ನೆಯ ಶತಮಾನದ ಸುರಂಗಗಳನ್ನು ಹೋಲುವ ಎರಡು ದೊಡ್ಡ ದೇವಾಲಯಗಳಲ್ಲಿ ಮತ್ತು ಪೀಕಿಂಗಿನ ಪಶ್ಚಿಮಕ್ಕಿರುವ ಚಿಯೆನ್-ಲುಂಗ್ ಚಕ್ರವರ್ತಿಯ ಬೇಸುಗೆ ಅರಮನೆಯಲ್ಲಿ ಉತ್ತರ ಕಾಲೀನ ಐರೋಪ್ಯ ವಕ್ರ ಶೈಲಿಯ (ಬರೋಕ್) ಪ್ರಭಾವಗಳನ್ನು ಕಾಣಬಹುದು.

	ಚೀನದ ಈ ಕಾಲದ ವಾಸ್ತು ನಿರ್ಮಾಣಗಳಲ್ಲಿ ತಾಂತ್ರಿಕ ನೈಪುಣ್ಯ, ರಚನಾ ಕೌಶಗಳು ಮರೆಯಾಗಿ ಕಣ್ಣಿಗೆ ಸುಂದರವೆನಿಸುವ ಆಲಂಕಾರಿಕ ಅಂಶಗಳಿಗೆ ಗಮನಕೊಡಲಾಗಿದೆ. ಅರಮನೆಯ ಕಟ್ಟಡಗಳಲ್ಲಿ ಬೃಹದ್ಗಾತ್ರ ಸರಳ ನಿರೂಪಣೆಗಳಿಗೆ ಪ್ರಾಧಾನ್ಯ ನೀಡಲಾಗಿದೆ. ಟೆ-ಮಿಯಾವೊದ ಅನೇಕ ಸುತ್ತು ಪ್ರಾಕಾರಗಳಲ್ಲಿ ಮತ್ತು ಬಾಗಿಲುಗಳಲ್ಲಿ ಈ ಅಂಶಗಳನ್ನು ಕಾಣಬಹುದು. ಮಂಚೂ ದೊರೆಗಳ ಕಾಲದಲ್ಲಿ ಸಣ್ಣ ಶಿಲ್ಪಗಳನ್ನು ಅಲಂಕಾರಣಕ್ಕೆ ಬಳಸಿಕೊಳ್ಳಲಾಗಿತ್ತು. ಪೀಕಿಂಗಿನಲ್ಲಿ ಚಿಂಗ್ ಅರಸರ ಬಣ್ಣಗಳಿಂದ ಅಲಂಕರಿಸುತ್ತಿದ್ದರು. ಕಟ್ಟಡದ ಚಾವಣಿಯನ್ನು ಹೊಳೆಯವ ನೀಲಿಗಾಜಿನ ಹಂಚುಗಳಿಂದಲೂ ಅದರ ಮೇಲಿನ ಶಿಖರವನ್ನು ಹಳದಿ, ನೀಲಿ ಅಥವಾ ಹಸಿರು ಬಣ್ಣದಿಂದಲೂ, ಕೆಲವು ಬಾರಿ ಗೋಡೆಗಳ ಹೊರ ಭಾಗಗಳನ್ನು ವಿವಿಧ ಬಣ್ಣಗಳಿಂದಲೂ ಅಲಂಕರಿಸಲಾಗುತ್ತಿತ್ತು.

	ದೀರ್ಘಕಾಲ ರಾಜಧಾನಿಯಾಗಿದ್ದ ಪೀಕಿಂಗ್ ನಗರದಲ್ಲಿ ಕೊನೆಯ ಕಾಲದ ವಾಸ್ತು ನಿರ್ಮಾಣಗಳು ಕೇಂದ್ರಿಕೃತವಾಗಿವೆ. ಅವುಗಳಲ್ಲಿ ಪ್ರಾಚೀನ ಮತ್ತು ಅರ್ವಾಚೀನ ಪದ್ಧತಿಗಳ ಸಂಗಮ ಮತ್ತು ಚೀನೀ ವಾಸ್ತುಪರಂಪರೆಯ ಕ್ರಮಾಗತ ಅವನತಿಗಳನ್ನು ಕಾಣಬಹುದು. ನಗರ ನಿರ್ಮಾಣದ ತಳವಿನ್ಯಾಸದಲ್ಲಿ ಔಪಚಾರಿಕತೆ ಮತ್ತು ಅಸಮತೆಗಳ ನಡುವನ ತಾಕಲಾಟ ಗಮನಾರ್ಹ. ನಗರದ ಉತ್ತರ ಭಾಗದಲ್ಲಿರುವ, 15 ಮೈ,. ಸುತ್ತಳತೆಯುಳ್ಳ, ಟಾರ್ಟರರ ನಗರ ಮತ್ತು ದಕ್ಷಿಣ ಭಾಗದಲ್ಲಿರುವ 5 x 2 ಚ.ಮ. ವಿಸ್ತಾರದ ಚೀನೀ ನಗರ-ಇಲ್ಲಿ ಈ ಅಂಶ ಸ್ಪಷ್ಟವಾಗಿದೆ. ಟಾರ್ಟರ ನಗರದಲ್ಲಿ ರಾಜವಂಶದ ನಿವಾಸಗಳು, ಪ್ರಮುಖ ಸರ್ಕಾರಿ ಕಚೇರಿಗಳು, ಹಿರಿಯ ಅಧಿಕಾರಿಗಳ ಮತ್ತು ಶ್ರೀಮಂತರ ವಸತಿಗಳು, ಕೃತಕ ಸರೋವರಗಳು, ಉದ್ಯಾನಗಳು ಮತ್ತು ವಿಶಾಲ ದೇವಮಂದಿರಗಳು ಇರುವುದರಿಂದ ಅದಕ್ಕೆ ಹೆಚ್ಚಿನ ಪ್ರಾಮುಖ್ಯವಿದೆ. ಆ ಭಾಗದ ಕೋಟೆಯ ಗೋಡೆಯ ಎತ್ತರ 48;, ಗೋಡೆಗಳನ್ನು ಬಲಗೊಳಿಸಲು ನಿರ್ಮಿಸಲಾಗಿರುವ ಒತ್ತುಗೋಡೆಗಳೂ ಒಂಬತ್ತು ಅಮೋಘವಾದ ಹೆಬ್ಬಾಗಿಲುಗಳೂ ವೈಶಿಷ್ಟ್ಯಪೂರ್ಣವಾಗಿವೆ. ಚೀನೀ ನಗರದ ಕೋಟೆ ಸಣ್ಣದು. ಅದರ ಇಕ್ಕಟ್ಟಾದ ರಸ್ತೆಗಳು ಕ್ರಮಬದ್ಧವಾಗಿಲ್ಲ. ಈ ಭಾಗದಲ್ಲಿ ಸಂಪ್ರದಾಯಾನುಗುಣವಾಗಿ ನಗರದ ದಕ್ಷಿಣ ದಿಕ್ಕಿನಲ್ಲಿರಬೇಕಾದ ಎರಡು ಮರದ ಪ್ರಾರ್ಥನಾವೇದಿಕೆಗಳನ್ನು ಬಿಟ್ಟರೆ ಮತ್ತಾವ ಗಮನಾರ್ಹ ನಿರ್ಮಾಣವೂ ಇಲ್ಲ.

	ಪೀಕಿಂಗ್ ನಗರದ ನಿರ್ಮಾಣ ಬಹಳ ಅಸಂಬದ್ಧವಾಗಿದೆ. ಪ್ರಮುಖ ರಸ್ತೆಗಳು ಸಹ ನೇರವಾಗಿಲ್ಲ. ಬಹುಶಃ ಅಲ್ಲಿ ಆಳಿದ ನಾಲ್ಕು ರಾಜಮನೆತನಗಳ ಕಾಲದಲ್ಲಿ ಉಂಟಾದ ಮಾರ್ಪಾಟುಗಳು ಅವುಗಳ ಅಸಂಬದ್ಧತೆಗೆ ಕಾರಣ. ಒಳಗಿನ ನಿಷಿದ್ಧ ನಗರದಲ್ಲಿ ಚೌ ಕಾಲದ ಪ್ರಭಾವಗಳನ್ನು ಸೂಚಿಸುವ ಕೆಲವು ಧಾರ್ಮಿಕ ಕಟ್ಟಡಗಳಿವೆ. ರಾಜವಂಶದ ಪುರಾತನರ ಮಂದಿರ ಅಥವಾ ಟೈ-ಮಿಯಾವೊ, ಭೂಮಿ ಮತ್ತು ಸುಗ್ಗಿದೇವತೆಗಳ ಪೂಜಾವೇದಿಕೆಗಳು ಮುಖ್ಯವಾದವು. ಮೊದಲನೆಯದು ಅರಮನೆಗಳ ಮಾದರಿಯಲ್ಲಿದೆ. ಅದರಲ್ಲಿ ಮಿಂಗ್ ಮತ್ತು ಚಿಂಗ್ ದೊರೆಗಳ ಪಾರ್ಥಿವ ದೇಹಗಳನ್ನು ಹೂಳಲಾಗಿದೆ. ನಿಷಿದ್ಧ ನಗರವನ್ನು ಅನೇಕ ಗೋಡೆಗಳಿಂದ ವಿಭಾಗಿಸಲಾಗಿದೆ. ದರ್ಬಾರು ಹಜಾರಗಳು ಇರುವ ಭಾಗ ಪ್ರಧಾನವಾದ್ದು. ಅದರ ಹಿಂಭಾಗದಲ್ಲಿ ರಾಜರ ವಾಸಗೃಹಗಳಿವೆ. ಅವುಗಳ ಸುತ್ತ ಇತರ ಪ್ರಮುಖರ ವಾಸಸ್ಥಾನಗಳೂ ಸ್ತ್ರೀಯರ ಅಂತಃಪುರಗಳೂ ದೇವಮಂದಿರಗಳೂ ಇವೆ. ಅಗ್ನೇಯ ಮತ್ತು ನೈರುತ್ಯ ದಿಕ್ಕುಗಳಲ್ಲಿ ಅರಸರ ಗ್ರಂಥಭಂಡಾರ ಮತ್ತು ಅಚ್ಚುಕೂಟಗಳಿವೆ.

	ಪೀಕಿಂಗ್ ವಾಸ್ತುವಿನಲ್ಲಿ ದರ್ಬಾರು ಹಜಾರಗಳು ಗಮನಾರ್ಹ ಕಟ್ಟಡಗಳು, ಮಿಂಗ್ ಮತ್ತು ಚಿಂಗ್ ಕಾಲದ ಅಲಂಕರಣ ಕಲೆಯ ಉತ್ಕಷ್ಟ ನಿದರ್ಶನಗಳು ಅವು. ವಿಸ್ತಾರ, ಪ್ರಮಾಣಬದ್ಧ ನಿರ್ಮಾಣ, ಆಕಾರ ಮತ್ತು ಸ್ಥಳಪರಿಮಿತಿಯ ಪರಿಣಾಮಗಳನ್ನು ಹೆಚ್ಚಿಸುವ ಎತ್ತರ ಅವುಗಳಲ್ಲಿ ಎದ್ದುಕಾಣುತ್ತವೆ. ಅವುಗಳ ವರ್ಣಸಂಯೋಜನೆಯೂ ಅದ್ಭುತ. ವೇದಿಕೆಗಳ, ಸೋಪಾನ ಪಂಕ್ತಿಗಳ, ಕಟಕಟೆಗಳ ಅಮೃತಶಿಲೆಯ ಬಿಳುಪು, ಚಾವಣಿಯ ಹೆಂಚುಗಳ ಹೊಳೆಯುವ ಹಳದಿ, ಮರಗೆಲಸದ ಪ್ರಕಾಶಮಾನವಾದ ಕೆಂಪು, ಸೂರುಗಳು ವಿವಿಧ ವರ್ಣಗಳ ಚಿತ್ರಗಾರಿಕೆಯ ಮಿನುಗು ನಿಜವಾಗಿಯೂ ಅಪೂರ್ವವಾದದ್ದು. ಐದು ಅಮೃತಶಿಲೆಯ ಸೇತುವೆಗಳನ್ನು ದಾಟಿದ ಮೇಲೆ ಸಿಗುವ ಮಹಾದ್ವಾರದ ಅನಂತರ 200' ಅಗಲದ ವಿಶಾಲ ಪ್ರಾಂಗಣದ ಹಿಂಬದಿಯಲ್ಲಿರುವ ಮೂರು ಪ್ರತ್ಯೇಕ ಸೋಪಾನಗಳ ಮೇಲ್ತುದಿಯಲ್ಲಿರುವ ಮೂರು ಬೇರೆ ಬೇರೆ ಆಕಾರದ ಜತಿ ಕಟ್ಟೆಗಳಲ್ಲಿ ಎಡತುದಿಯದು ರಾಜಪೀಠವುಳ್ಳ ದರ್ಬಾರು ಹಜಾರ ಅಥವಾ ಟೈ-ಹೊ-ಟೆಯೆನ್ (ವಿಸ್ತೀರ್ಣ ಸು. 200' x 100'). ಮಧ್ಯದಲ್ಲಿರವುದು ಶ್ರೀಮಂತರು, ಆಸ್ಥಾನಿಕರು ಕಾಯವು ಚುಂಗ್ - ಹೋ- ಟಿಯೆನ್  (ವಿಸ್ತೀರ್ಣ ಸು. 100' x 100') ಮತ್ತು ಬಲತುದಿಯ ದೊರೆಗಳ ಉತ್ಸವ ಕೂಟಗಳ ಹಜಾರ (ವಿಸ್ತೀರ್ಣ ಸು. 200' x 100'). ಇವು ಆ ಕಟ್ಟಡಗಳ ಗಮನಾರ್ಹ ವಿಭಾಗಗಳು.

		ಚೀನೀ ನಗರದಲ್ಲಿರುವ ಸ್ವರ್ಗದ ವೇದಿಕೆ 1420ರಲ್ಲಿ ನಿರ್ಮಿತವಾಗಿ 1754ರಲ್ಲಿ ಜೀರ್ಣೋದ್ದಾರವಾಯಿತು. ಆ ಸಮಯದಿಂದ ಈವರೆಗೂ ಅಚ್ಚಳಿಯದೆ ಉಳಿದು ಬಂದಿರುವ ವಾಸ್ತು ಅಂಶಗಳನ್ನು ಚೀನೀ ಶೈಲಿಯ ಅಖಂಡತೆಗೆ ಉತ್ತಮ ನಿದರ್ಶನಗಳೆಂದು ಪರಿಗಣಿಸಬಹುದಾಗಿದೆ.							(ಬಿ.ಕೆ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ